

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವವನ್ನು ಅ. 5ರಂದು ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ರಾಮಚಂದ್ರ ಗೌಡ ಮಾಹಿತಿ ನೀಡಿದ್ದಾರೆ.
ನಗರದ ವಾರ್ತಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಘಟಿಕೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ರಾಜ್ಯಪಾಲ ವಜುಭಾಯಿ ವಾಲಾ, ಸಹ ಕುಲಾಧಿಪತಿ, ಬೆಂಗಳೂರಿನ ನ್ಯಾಕ್ ಸಂಸ್ಥೆಯ ಪ್ರೊ.ಎಸ್.ಸಿ.ಶರ್ಮಾ ಪಾಲ್ಗೊಳ್ಳಲಿದ್ದಾರೆ ಎಂದರು.
ಸ್ನಾತಕ ತರಗತಿಗಳಿಗೆ 11 ಸುವರ್ಣ ಪದಕ, ಸ್ನಾತಕೋತ್ತರ ತರಗತಿಗಳಿಗೆ 22 ಸುವರ್ಣ ಪದಕ ನೀಡಲಾಗುವುದು. 4 ವಿಷಯಗಳಲ್ಲಿ ಅತ್ಯುನ್ನತ ಅಂಕ ಗಳಿಸಿದವರಿಗೆ ಪ್ರಾಯೋಜಿತ ಸುವರ್ಣ ಪದಕ ನೀಡಲಾಗುವುದು. 79 ಪಿಎಚ್.ಡಿ. ಪ್ರದಾನ ಮಾಡಲಾಗುತ್ತಿದೆ. ರಾಜ್ಯಪಾಲರು ಕೇವಲ 100 ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣ ಪತ್ರ ನೀಡಲಿದ್ದಾರೆ ಎಂದು ತಿಳಿಸಿದರು.
33,974 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ: ವಿವಿಯಲ್ಲಿ ಸ್ನಾತಕ ಪದವಿ ಗಳಿಸಿದ 31,262 ವಿದ್ಯಾರ್ಥಿಗಳ ಪೈಕಿ 77 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದಾರೆ. ಅದರಲ್ಲಿ 11 ಜನರಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ. ಪದವಿ ಗಳಿಸಿದ 2,712 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದು, 22 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಯುಜಿ ಮತ್ತು ಪಿಜಿ ಸೇರಿ 33,974 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದರು.
ಕಲಸಚಿವ ಡಾ.ಬಸವರಾಜ ಪದ್ಮಶಾಲಿ, ಹಣಕಾಸು ಅಧಿಕಾರಿ ಡಿ.ಎನ್. ಪಾಟೀಲ. ಮೌಲ್ಯಮಾಪನ ಕುಲಸಚಿವ ಡಾ. ಎಂ.ಎಸ್. ಹುರಕಡ್ಲಿ ಇನ್ನಿತರರು ಇದ್ದರು.
ಸಮಾರಂಭಕ್ಕೆ 100 ಜನರಿಗೆ ಮಾತ್ರ ಅವಕಾಶ: ಕೋವಿಡ್-19 ಹಿನ್ನೆಲೆಯಲ್ಲಿ ಸಭಾಂಗಣದೊಳಗೆ ಕೇವಲ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಪಿಎಚ್.ಡಿ. ಗಳಿಸಿದ 79 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಮಾತ್ರ ಸಾಂಕೇತಿಕವಾಗಿ ಪದವಿ ಪತ್ರ ಪ್ರದಾನ ಮಾಡಲಾಗುತ್ತಿದೆ. ಉಳಿದವರಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಎಂ.ರಾಮಚಂದ್ರ ಅವರು ಮಾಹಿತಿ ನೀಡಿದರು.
ಮೂವರಿಗೆ ಗೌರವ ಡಾಕ್ಟರೇಟ್: ಕ್ರೀಡಾ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಂಗಳೂರಿನ ಗೋವಿಂದರಾಜ್, ಔದ್ಯೋಗಿಕ ಮತ್ತು ಸಾಂಸ್ಥಿಕ ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕೃತ ಬೆಂಗಳೂರಿನ ಮೋಹನದಾಸ ಪೈ, ಧಾರ್ಮಿಕ ಹಾಗೂ ಸಮಾಜೋ-ಶೈಕ್ಷಣಿಕ ಕ್ಷೇತ್ರಕ್ಕಾಗಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ರಾಜಯೋಗೀಂದ್ರ ಸ್ವಾಮೀಜಿ, ಮೂರುಸಾವಿರ ಮಠ ಹುಬ್ಬಳ್ಳಿ ಅವರಿಗೆ ಆರ್‌ಸಿಯುನಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ.
ವಿವಿಗೆ 127 ಎಕರೆ ಜಮೀನು: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ 174.18 ಎಕರೆ ಜಮೀನನ್ನು ವಿವಿಗೆ ಹಸ್ತಾಂತರಿಸದಿರುವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು. ಇದೀಗ ರಾಜ್ಯ ಸರ್ಕಾರವು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪಜ್ಜನ ಗುಡ್ಡದ ಬಳಿ ರಾಣಿ ಚನ್ನಮ್ಮ ವಿವಿಗೆ 127 ಎಕರೆ ಜಮೀನು ನೀಡಿರುವುದಾಗಿ ಅಧಿಕೃತ ಆದೇಶ ಹೊರಡಿಸಿದೆ ಎಂದು ಆರ್‌ಸಿಯು ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ತಿಳಿಸಿದರು.