ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಸಂಘಟನೆಗಳ ಆಗ್ರಹ

010201
Published on

ಬೆಳಗಾವಿ: ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಹಾಗೂ ಮೃತ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರವೇ, ಕರ್ನಾಟಕ ವಾಲ್ಮೀಕಿ ಯುವ ಸೇನೆ, ಭೀಮ ಆರ್ಮಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಮೂಲಕ ಪ್ರಧಾನಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರಕರಣ ಮುಚ್ಚಿಹಾಕುವ, ದುಷ್ಕರ್ಮಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಯುಪಿ ಪೊಲೀಸರು ಮಧ್ಯರಾತ್ರಿ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತ್ಯಕ್ರಿಯೆ ವೇಳೆ ಕುಟುಂಬದವರನ್ನು ದೂರ ಇಟ್ಟಿರುವುದು ಸರಿಯಲ್ಲ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ವಿಲ ಆರೋಪ: ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪದೇಪದೆ ಮಹಿಳಾ ದೌರ್ಜನ್ಯ ಘಟನೆಗಳು ಅಲ್ಲಿ ನಡೆಯುತ್ತಿವೆ. ಅತ್ಯಾಚಾರ ಮತ್ತು ಕೊಲೆ ಆರೋಪ ಎದುರಿಸುತ್ತಿರುವ ಆರೋಪಿತರ ವಿರುದ್ಧ ಸಮಗ್ರ ತನಿಖೆ ನಡೆಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರ ವಿಫಲವಾಗಿದೆ.

ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಆರೋಪಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ. ಈ ವಿಷಯದಲ್ಲಿ ಯುಪಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷ ಸಚಿನ ದಡ್ಡಿ, ಮಂಜು ನಾಯಕ, ಎಲ್.ಎನ್. ಮೂರ್ತಿ, ಸೂರ್ಯಪ್ರಕಾಶ, ರಾಕೇಶ ಪಾಟೀಲ, ಹೊನ್ನಪ್ಪ ನಾಯಕ, ಸತ್ಯರಾಜ ಬಸಾಪುರ, ಭೀಮ ಆರ್ಮಿ ಸಂಘಟನೆ ಅಧ್ಯಕ್ಷ ಸುನೀಲ ಕೊಟಬಾಗಿ, ರಾಜು ಯಾದವಾಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net