

ಮಡಿಕೇರಿ: ಕಂಬಿಬಾಣೆ-ಭೂತನಕಾಡು, ಕಂಬಿಬಾಣೆ-ಚಿಕ್ಲಿಹೊಳೆ, ಕಂಬಿಬಾಣೆ-ಕೊಡಗರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಸಾಕಷ್ಟು ಹದಗೆಟ್ಟಿದ್ದು, ಕೂಡಲೇ ರಸ್ತೆ ಸರಿಪಡಿಸುವಂತಾಗಬೇಕು. ಕಡು ಬಡವರಿಗೆ ನಿವೇಶನ ಒದಗಿಸಬೇಕು. ಬಸ್ ಸಂಪರ್ಕ ಕಲ್ಪಿಸಬೇಕು ಎಂದು ’ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯದಲ್ಲಿ ಕೇಳಿ ಬಂದಿತು.
ಕಂಬಿಬಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸಭೆಯ ಆರಂಭದಲ್ಲಿ ಮಾತನಾಡಿದ ಗ್ರಾಮಸ್ಥ ಶಶಿಕಾಂತ್ ರೈ, ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತಾಗಬೇಕು. ಕಾಡಾನೆ-ಮಾನವ ಸಂಘರ್ಷ ತಡೆಯಬೇಕು. ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಪ್ರತಿಕ್ರಿಯಿಸಿ, ಈಗಾಗಲೇ ಏಳು ಹಂತದಲ್ಲಿ ಬೆಳೆಹಾನಿಗೆ ಪರಿಹಾರ ವಿತರಿಸಲಾಗಿದೆ. ೮ನೇ ಹಂತದಲ್ಲಿ ಬೆಳೆಹಾನಿ ಪರಿಹಾರಕ್ಕೆ ಅನುಮೋದನೆ ದೊರೆತ ನಂತರ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು. ಕಾಡಾನೆ ಮತ್ತು ಮಾನವ ಸಂಘರ್ಷ ತಡೆಯುವ ಬಗ್ಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ, ಈಗಾಗಲೇ ೬.೫೦ ಕಿ.ಮೀ. ಟ್ರಂಚ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಮಾತನಾಡಿ, ಕಾಡಾನೆ ಹಾವಳಿಯಿಂದ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಕಾಡಾನೆ ಉಪಟಳವನ್ನು ನಿಯಂತ್ರಿಸಬೇಕು. ಸಾರ್ವಜನಿಕರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಬೇಕು ಎಂದು ಹೇಳಿದರು. ವಲಯ ಅರಣ್ಯಾಧಿಕಾರಿ ಪ್ರತಿಕ್ರಿಯಿಸಿ, ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಆರ್‌ಆರ್‌ಟಿ ತಂಡದ ಮೂಲಕ ಗಸ್ತು ನಿಯೋಜಿಸಲಾಗಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರಯತ್ನ ಮುಂದುವರೆದಿದೆ ಎಂದರು.
ಶಶಿಕಾಂತ್ ರೈ ಮಾತನಡಿ, ಚಿಕ್ಲಿಹೊಳೆ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವಂತಾಗಬೇಕು ಎಂದು ಕೋರಲಾಗಿತ್ತು. ಆದರೆ ಇದುವರೆಗೆ ಕಾರ್ಯಗತವಾಗಿಲ್ಲ. ಕಾಡಾನೆ ಹಾವಳಿ ಶಾಶ್ವತ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು. ಕಂಬಿಬಾಣೆ-ಕೊಡಗರ ಹಳ್ಳಿ ರಸ್ತೆಯನ್ನು ಅಲ್ಲಲ್ಲಿ ಸರಿಪಡಿಸಲಾಗಿದ್ದು, ಆದರೆ ಪರಿಪೂರ್ಣ ಕೆಲಸ ಆಗಿಲ್ಲ ಎಂದು ದೂರಿದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಮಾತನಾಡಿ, ಈಗಾಗಲೇ ೧೩೦೦ ಮೀ. ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು ೧೩೦೦ ಮೀ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಗ್ರಾಮಸ್ಥ ಲವ ಶಾಂತಪ್ಪ ಮಾತನಾಡಿ, ಕಂಬಿಬಾಣೆ ಬಳಿಯ ಮೂರನೇ ಬ್ಲಾಕ್‌ನ್ನು ೭ನೇ ಹೊಸಕೋಟೆ ಗ್ರಾ.ಪಂ.ಗೆ ಸೇರ್ಪಡೆ ಮಾಡಲಾಗಿದ್ದು, ಇದರಿಂದ ಕಂಬಿಬಾಣೆ ಬಳಿ ಇರುವ ಮೂರನೇ ಬ್ಲಾಕ್ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕಂಬಿಬಾಣೆ ಗ್ರಾ.ಪಂ.ಗೆ ಮೂರನೇ ಬ್ಲಾಕ್‌ನ್ನು ಸೇರ್ಪಡೆ ಮಾಡಬೇಕು ಎಂದು ಕೋರಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈಗಾಗಲೇ ಗ್ರಾ.ಪಂ.ಚುನಾವಣೆ ಆಗಿ ಎರಡೂವರೆ ವರ್ಷ ಆಗುತ್ತಿದೆ. ಆದ್ದರಿಂದ ಮುಂದಿನ ಗ್ರಾ.ಪಂ.ಚುನಾವಣೆಗೂ ಮೊದಲು(೬ ತಿಂಗಳು) ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಲಹೆ ಮಾಡಿದ ಅವರು, ಹೊಸ ಗ್ರಾ.ಪಂ.ಗೆ ಸೇರ್ಪಡೆ ಸಂಬಂಧ ಪ್ರಕಟಿಸುವ ಮೊದಲು ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗುವುದು. ಆ ಸಂದರ್ಭದಲ್ಲಿ ಮಾಹಿತಿಯನ್ನು ಲಿಖಿತವಾಗಿ ನೀಡಬಹುದಾಗಿದೆ ಎಂದು ಹೇಳಿದರು.
ಗ್ರಾ.ಪಂ.ಸದಸ್ಯರಾದ ಕೃಷ್ಣ ಮಾತನಾಡಿ, ಕಂಬಿಬಾಣೆ ವ್ಯಾಪ್ತಿಯಲ್ಲಿ ೨೧೫ ಕ್ಕೂ ಹೆಚ್ಚು ಕುಟುಂಬಗಳು ನಿವೇಶನ ರಹಿತರಿದ್ದು, ಇವರಿಗೆ ಕೂಡಲೇ ನಿವೇಶನ ಒದಗಿಸಿ ಹಕ್ಕುಪತ್ರ ನೀಡುವಂತಾಗಬೇಕು. ಚಿಕ್ಲಿಹೊಳೆ ಜಲಾಶಯ ವೀಕ್ಷಣೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸಂಬಂಧ ರಸ್ತೆ ಸರಿಪಡಿಸುವುದರ ಜತೆಗೆ ಶೌಚಾಲಯ ನಿರ್ಮಿಸುವಂತಾಗಬೇಕು. ಚಿಕ್ಲಿಹೊಳೆ ಜಲಾಶಯ ನಿರ್ವಹಣೆ ಸಂಬಂಧ ಪ್ರವಾಸೋದ್ಯಮ ಇಲಾಖೆಗೆ ವಹಿಸುವಂತಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಪ್ರತಿಕ್ರಿಯಿಸಿ, ನಿವೇಶನ ರಹಿತರಿಗೆ ಪೈಸಾರಿ ಜಾಗದಲ್ಲಿ ಆದಷ್ಟು ಶೀಘ್ರ ನಿವೇಶನ ಒದಗಿಸಲಾಗುವುದು.
ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿರುವ ಟ್ಯಾಕ್ಸಿಯಿಂದ ಬದುಕು ಕಟ್ಟಿಕೊಳ್ಳಲಾಗುತ್ತದೆ. ಆದರೆ ನಾಲ್ಕು ಚಕ್ರದ ವಾಹನ ಇದೆ ಎಂದು ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಿದ್ದಾರೆ. ಇದು ಸರಿಯೇ ಎಂದು ಸ್ಥಳೀಯರೊಬ್ಬರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಆದಾಯ ಪ್ರಮಾಣ ಪತ್ರ ಪಡೆಯಲು ಬಿಪಿಎಲ್ ಕಾರ್ಡ್ ಬೇಕಿಲ್ಲ. ಇಂತಹ ಪ್ರಕರಣಗಳಿದ್ದಲ್ಲಿ ತಕ್ಷಣವೇ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದರು.
ಸಾರ್ವಜನಿಕರೊಬ್ಬರು ಮಾತನಾಡಿ, ಮಡಿಕೇರಿ-ಕಂಬಿಬಾಣೆ-ಕುಶಾಲನಗರ, ಕುಶಾಲನಗರ-ಕಂಬಿಬಾಣೆ-ಮಡಿಕೇರಿ ಮಾರ್ಗ ಒಂದು ಬಸ್ ಬರುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಅವಲಂಬಿಸಿದ್ದಾರೆ. ಆದ್ದರಿಂದ ಕೂಡಲೇ ಬಸ್ ಸೌಲಭ್ಯ ಕಲ್ಪಿಸಿ, ಶಾಲಾ ಮಕ್ಕಳಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾರವರು, ಕರೊನಾ ಪೂರ್ವದಲ್ಲಿ ಸಂಜೆ ವೇಳೆಯೂ ಬಸ್ ಸಂಪರ್ಕ ಕಲ್ಪಿಸಲಾಗಿತ್ತು. ಮತ್ತೆ ಬಸ್ ಸಂಚಾರಕ್ಕೆ ಅವಕಾಶ ಮಾಡಲಾಗುವುದು ಎಂದರು.
ಚಿಕ್ಲಿಹೊಳೆ ಜಲಾಶಯವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆ ಮಾಡಬೇಕು. ಚಿಕ್ಲಿಹೊಳೆಯಲ್ಲಿ ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ಸಿಸಿಟಿವಿ ಅಳವಡಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಜತೆಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ ತೆರವುಗೊಳಿಸಬೇಕು. ಸರ್ಕಾರಿ ಜಾಗವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಕಾಶ್, ಗ್ರಾ.ಪಂ.ಅಧ್ಯಕ್ಷ ಮಧು ನಾಗಪ್ಪ, ಉಪಾಧ್ಯಕ್ಷೆ ಅಶ್ವಿನಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗ
ಳು ಇತರರು ಇದ್ದರು.