

ಹೊಸಕೋಟೆ: ತಾಲೂಕಿನ ಸೂಲಿಬೆಲೆ ಹೋಬಳಿಯ ಯನಗುಂಟೆ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಕಚೇರಿ ಎದುರು ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಗೀತಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸರ್ಕಾರಿ ಶಾಲೆ ಇಲ್ಲ. ಸ್ಮಶಾನವಿಲ್ಲ. ಗ್ರಾಮದ ಸಮಸ್ಯೆ ಬಗ್ಗೆ ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಗಮನ ಹರಿಸಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕೆಂದು ಗ್ರಾಮದ ಮುಖಂಡ ನಾಗೇಶ್ ಆಗ್ರಹಿಸಿದರು.
ಸ್ವಂತ ಜಮೀನು ಇಲ್ಲದವರು ಮೃತ ದೇಹ ಅಂತ್ಯ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ಇದೆ. ಹಾಗೆಯೇ ಗ್ರಾಮದಲ್ಲಿ ಸರ್ಕಾರ ಶಾಲೆ ಇಲ್ಲದ ಪರಿಣಾಮ ಮಕ್ಕಳು ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋಗುವ ಪರಿಸ್ಥಿತಿ ಇದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮದ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದ ಕೆಲವರು ಸರ್ಕಾರಿ ಜಾಗ ಕಬಳಿಸಿದ್ದು, ಅಧಿಕಾರಿಗಳು ಕೂಡಲೇ ಸರ್ವೇ ಮಾಡಿ ಸರ್ಕಾರಿ ಜಾಗ ಉಳಿಸಿ ಗ್ರಾಮಕ್ಕೆ ಸೌಕರ್ಯ ಮಾಡಿಕೊಡಬೇಕು ಎಂದು ಯನಗುಂಟೆ ಗ್ರಾಮದ ಮುಖಂಡ ರಾಮಕೃಷ್ಣಪ್ಪ ತಿಳಿಸಿದರು.
ಗ್ರಾಮದ ಸರ್ವೇ ನಂ.3ರಲ್ಲಿ ಸರ್ಕಾರಿ ಜಮೀನಿದ್ದು, ಕೂಡಲೇ ಆ ಜಾಗವನ್ನು ಗ್ರಾಮಕ್ಕೆ ಸ್ಮಶಾನಕ್ಕೆ ಮೀಸಲಿಡುವುದು ಹಾಗೂ ಸರ್ಕಾರಿ ಶಾಲೆಗೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಗೀತಾ ಅವರಿಗೆ ಮನವಿ ಸಲ್ಲಿಸಿದರು.
ಸಮಸ್ಯೆ ಬಗೆಹರಿಸಲು ಬರುವ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಸೌಜನ್ಯವಾಗಿ ವರ್ತಿಸಿ ಸಹಕರಿಸಿದರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗೀತಾ ತಿಳಿಸಿದರು.