

ಹುಬ್ಬಳ್ಳಿ: ಅಂಗವಿಕಲರು ಹಾಗೂ ಅಸಹಾಯಕರಿಗೆ ಸರ್ಕಾರದಿಂದ ಸೌಲಭ್ಯ ಲಭಿಸಬೇಕು. ಆದರೆ, ಕೆಲವೆಡೆ ನ್ಯೂನತೆ ಹಾಗೂ ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ಅವರೂ ನಮ್ಮ ಹಾಗೆಯೇ ಎಂಬ ಮಾನವೀಯತೆಯಿಂದ ಸೌಲಭ್ಯ ಕಲ್ಪಿಸಬೇಕು ಎಂದು ನ್ಯಾಯಾಧೀಶ ಕೆ. ಯಮನಪ್ಪ ಹೇಳಿದರು.
ಸಕ್ಷಮ ಉತ್ತರ ಕರ್ನಾಟಕ ಪ್ರಾಂತ, ಮಜೇಥಿಯಾ ಫೌಂಡೇಷನ್, ಕಾನೂನು ಸೇವಾ ಪ್ರಾಧಿಕಾರ, ಎಐಎಂ, ಯುಥ್ ಫಾರ್ ಸೇವಾ ವತಿಯಿಂದ ಇಲ್ಲಿನ ಕೆಎಂಸಿಆರ್‌ಐ ನೃಪತುಂಗ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ಎಷ್ಟೇ ಕಠಿಣವಿದ್ದರೂ, ಮನುಷ್ಯನಾದವನಿಗೆ ಸಹಾನುಭೂತಿ ಅಗತ್ಯ. ನಿರ್ಗತಿಕರು, ಅಂಗವಿಕಲರು ಹಾಗೂ ಅಸಹಾಯಕರು ಸರ್ಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾದರೆ ನೇರವಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇದರಿಂದ ಕಾನೂನಿನ ನೆರವು ಸಿಗಲಿದೆ ಎಂದರು.
ನ್ಯಾಯಾಧೀಶ ಆರ್. ರಾಘವೇಂದ್ರ ಮಾತನಾಡಿ, ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಅಸಹಾಯಕರ ನಡುವೆ ಬದುಕುವ ಅರ್ಹತೆ ನಮಗಿದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕು. ಇಲ್ಲದಿದ್ದರೆ ಇಂತಹ ದಿನಾಚರಣೆಗೆ ಅರ್ಥವಿಲ್ಲ. ಅಂಗವಿಕಲರಲ್ಲಿಯೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಪ್ರತಿಭೆಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಪ್ರೋತ್ಸಾಹಿಸಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲರನ್ನು ಸನ್ಮಾನಿಸಲಾಯಿತು. ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಕೆಎಂಸಿಆರ್‌ಐ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಐಎಂಎ ಅಧ್ಯಕ್ಷ ಪ್ರಭು ಬಿರಾದಾರ, ಸಿಎಒ ರಮೇಶ ಕಳಸದ, ಪ್ರೊ. ಸಂದೀಪ ಬೂದಿಹಾಳ, ವಿಶ್ವಧರ್ಮ ದಿವ್ಯಾಂಗ ಶಾಲೆ ಮುಖ್ಯಸ್ಥ ಐ.ಕೆ. ಲಕ್ಕುಂಡಿ, ಡಾ. ಕೆ.ಎಫ್. ಕಮ್ಮಾರ, ವಕೀಲೆ ಸವಿತಾ ಪಾಟೀಲ, ಡಾ. ವಿ.ಬಿ. ನಿಟಾಲಿ, ಡಾ. ಸುನಿಲ ಗೋಖಲೆ, ಡಾ. ನಾಗಲಿಂಗ ಮುರಗಿ ಇತರರು ಇದ್ದರು.