ಗಿಡಕ್ಕೆ ಬೆಂಕಿ ಹಚ್ಚುವ ಕಿಡಿಗೇಡಿ ವಿರುದ್ಧ ಆಕ್ರೋಶ

mnvi forest
ಮಾನ್ವಿ ಪಟ್ಟಣದ ಆಟೋನಗರದ ಹತ್ತಿರ ದುಷ್ಕರ್ಮಿಗಳ ಹಚ್ಚಿದ ಬೆಂಕಿಗೆ ಆಹುತಿಯಾದ ಗಿಡಗಳು.
Published on

ಮಾನ್ವಿ: ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪಟ್ಟಣದ ಹೊರವಲದ ರಸ್ತೆ ಬದಿ ಬೆಳದಿರುವ ಗಿಡಗಳಿಗೆ ಬೆಂಕಿ ಹಚ್ಚುತ್ತಿರುವ ಕಿಡಿಗೇಡಿಗಳ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ ಬುಗಿಲೆದ್ದಿದೆ.


ಪಟ್ಟಣದ ಹೊರವಲಯದ ಆಟೋನಗರದಲ್ಲಿ ಅರಣ್ಯ ಇಲಾಖೆ ಜಿಯುಎ ಯೋಜನೆ ಅಡಿಯಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿ ನೂರಾರು ಗಿಡಗಳನ್ನು ಹಾಕಲಾಗಿದೆ. ಉತ್ತಮವಾಗಿ ಬೆಳದ ಗಿಡಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ್ದರಿಂದ ರಸ್ತೆ ಬದಿಯಲ್ಲಿನ ಅನೇಕ ಮರ ಗಿಡಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಹಚ್ಚಿದ ಪರಿಣಾಮ ಗಿಡಗಳು ನಾಶ


ಪಟ್ಟಣದ ಸಿಂಧನೂರು ರಸ್ತೆಯಲ್ಲಿನ ಅಟೋನಗರದಿಂದ ಸೂರ್ಯ ಫಂಕ್ಷನ್‌ಹಾಲ್, ಪೆಟ್ರೋಲ್ ಬಂಕ್‌ನಿಂದ ಆರ್‌ಜಿ ಕ್ಯಾಂಪ್ ರಸ್ತೆ, ತುಂಗಭದ್ರ ಕಾಲುವೆ 85ರ ಬದಿಗಳಲ್ಲಿ, ಎಪಿಎಂಸಿಯ ರಸ್ತೆ ವಿಭಾಜಕಗಳ ಮಧ್ಯದಲ್ಲಿ 14 ಹೆಕ್ಟೆರ್ ವಿಸ್ತೀರ್ಣದಲ್ಲಿ 4,200 ಕ್ಕೂ ಹೆಚ್ಚು ವಿವಿಧ ತಳಿಯ ಗಿಡಗಳನ್ನು ನೆಡಲಾಗಿದೆ. ಅವು ಬೇಸಿಗೆಯ ಬಿಸಿಲಿನ ತಾಪಕ್ಕೆ ಒಣಗುತ್ತಿದ್ದು, ಬೀದಿ ದನಗಳ ಹಾವಳಿಗೆ ನಾಶವಾಗುತ್ತಿವೆ.ರೈತರ ಮೇವಿನ ಟ್ರ್ಯಾಕ್ಟರ್ ಸಾಗಾಣಿಕೆಯಿಂದ ಮೇವು ರಸ್ತೆ ಬದಿಯಲ್ಲಿ ಬಿದ್ದು ಗಿಡಗಳ ಪಕ್ಕದಲ್ಲಿ ಬಿಸಿಲಿನ ತಾಪಕ್ಕೆ ಒಣಗಿರುವುದರಿಂದ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಗಿಡಗಳು ಸುಟ್ಟು ಹೋಗಿವೆ.

ಅರಣ್ಯ ಇಲಾಖೆ ಜೊತೆೆ ಸಾರ್ವಜನಿಕರು ಕೈಜೋಡಿಸಿ


ಅತಿ ಬಿಸಿಲು ಹೊಂದಿರುವ ಜಿಲ್ಲೆಯಲ್ಲಿ ಪರಿಸರ ನಾಶದಿಂದ ಮುಂದಿನ ದಿನಗಳಲ್ಲಿ ಉಷ್ಟತೆಯ ಪ್ರಮಾಣ ಹೆಚ್ಚಾಗುತ್ತದೆ. ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರ, ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ನೆರಳು ದೊರೆಯುವುದಿಲ್ಲ. ಅಗತ್ಯವಾದ ಪ್ರಾಣವಾಯು ನೀಡುವ ಗಿಡಗಳನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜೊತೆೆ ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ.


ಪ್ರಾದೇಶಿಕ ಅರಣ್ಯ ವಲಯಧಿಕಾರಿ ಎ.ಸುರೇಶ ಮಾತನಾಡಿ, ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟ ಗಿಡಗಳಿಗೆ ಬೆಂಕಿ ಹಚ್ಚುತ್ತಿರುವ ದುಷ್ಕರ್ಮಿಗಳ ಪತ್ತೆಗೆ ತೀವ್ರವಾದ ನಿಗವಾಹಿಸಲಾಗುತ್ತಿದೆ. ರಸ್ತೆ ಬದಿಯಲ್ಲಿನ ಜಮೀನಿನ ರೈತರಿಗೆ ಬೇಸಿಗೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಸಮಯದಲ್ಲಿ ರಸ್ತೆ ಬದಿಯ ಗಿಡಗಳಿಗೆ ಬೆಂಕಿ ತಗುಲದಂತೆ ಮುನ್ನೇಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.


ಬೇಸಿಗೆ ಸಮಯದಲ್ಲಿ ಗಿಡಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ನಿಯಮಿತವಾಗಿ ನೀರನ್ನು ಹಾಕಲಾಗುತ್ತಿದೆ. ಪ್ರತಿ ಮೂರು ಕಿ.ಮೀ.ಗೆ ಒಬ್ಬರಂತೆ ಅರಣ್ಯ ಇಲಾಖೆ ಗಿಡಗಳ ಸಂರಕ್ಷಣೆಗಾಗಿ ನೇಮಕ ಮಾಡಿದ್ದು. ಅವರು ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ಸಂರಕ್ಷಣೆ ಮಾಡಲಿದ್ದಾರೆ. ಸಾರ್ವಜನಿಕರು ಕೂಡ ಸಹಕಾರ ನೀಡಿದರೆ ಪರಿಸರ ಉಳಿಸಲು ಸಾಧ್ಯ ಎಂದರು.

ಅರಣ್ಯ ಇಲಾಖೆ ಉತ್ತಮ ಪರಿಸರಕ್ಕಾಗಿ ಗಿಡಗಳನ್ನು ಬೆಳಸುವುದಲ್ಲದೆ ಅವುಗಳ ರಕ್ಷಣೆ ಮಾಡಬೇಕು.ಬೇಸಿಗೆಯಲ್ಲಿ ಬೆಂಕಿ ಹಚ್ಚಿದರೆ ಗಿಡಗಳು ನಾಶವಾಗುತ್ತವೆ. ಪರಿಸರ ಉಳಿಸಿದರೆ ನಾವು ಉಳಿಯುತ್ತೇವೆ.ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರನ್ನು ವಿರುದ್ಧ ಕ್ರಮವಹಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೋಳ್ಳಬೇಕು.ರಾಜಾ ವಸಂತನಾಯಕ,ಪರಿಸರ ಪ್ರೇಮಿ ಮಾನ್ವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net