ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿಯಮ ಪಾಲನೆ ನೇಪಥ್ಯಕ್ಕೆ

Oct 22 dhl Realiti chek news ph-1
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಕರೊನಾ ಲಾಡ್‌ಡೌನ್ ಸಡಿಲಿಗೆ ಬಳಿಕ ಜಿಲ್ಲೆಯಲ್ಲಿ ನಿಯಮ ಪಾಲನೆ ನೇಪಥ್ಯಕ್ಕೆ ಸರಿದಿದೆ. ರೋಗ ನಿರೋಧಕ ಶಕ್ತಿ ಇದೆ ನನಗೇನೂ ಆಗಲ್ಲ, ನಾನು ವಯಸ್ಕ ನನ್ನನ್ನು ಕರೊನಾ ಏನು ಮಾಡಲು ಸಾಧ್ಯ ಎಂಬಂತಹ ಬಂಡತನ ಪ್ರದರ್ಶಿಸುತ್ತಿರುವ ಜನರು ನಿಯಮ ಗಾಳಿಗೆ ತೂರಿದ್ದಾರೆ.

ಮಾಸ್ಕ್ ಧರಿಸಿದರೆ ಉಸಿರಾಟಕ್ಕೆ ತೊಂದರೆ, ಸ್ಯಾನಿಟೈಸರ್ ಬಳಸಿದರೆ ಕ್ಯಾನ್ಸರ್ ಬರುತ್ತೆ ಎಂಬ ಮಾತುಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದ್ದು, ಸರ್ಕಾರದ ಜಾಗೃತಿ ಕಾರ್ಯಕ್ರಮ ಕಳಾಹೀನವಾಗುತ್ತಿವೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15 ಸಾವಿರ ಗಡಿಯಲ್ಲಿದೆ. ಏತನ್ಯಧ್ಯೆ ಸೋಂಕಿಗೆ ಈಗಾಗಲೇ 120 ಮಂದಿ ಬಲಿಯಾಗಿದ್ದಾರೆ. ಆದರೂ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ.

ಮೂಗು ಬಾಯಿ ಮುಚ್ಚದಂತೆ ಮಾಸ್ಕ್ ಧರಿಸುವುದು, ಅಂತರ ಮರೆತು ಗುಂಪು ಗೂಡುವುದು ಸೇರಿ ನೆಪಮಾತ್ರಕ್ಕೆ ಎಂಬಂತೆ ಸ್ಯಾನಿಟೈಸರ್ ಬಳಕೆ ಮಾಡುತ್ತಿರುವ ಜನತೆ ಕರೊನಾ ಮರೆತವರಂತೆ ವರ್ತಿಸುತ್ತಿದ್ದಾರೆ. ಮಾರುಕಟ್ಟೆ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೈಮರೆತು ವರ್ತಿಸುತ್ತಿರುವುದು ವಿಜಯವಾಣಿ ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂದಿದೆ.

ದಂಡ ಪ್ರಯೋಗವೂ ದಂಡ!: ಕರೊನಾ ನಿಯಮ ಪಾಲನೆ ಉಲ್ಲಂಘನೆ ವಿರುದ್ಧ ಜಿಲ್ಲಾಡಳಿತ ಪ್ರಯೋಗಿಸುತ್ತಿರುವ ದಂಡಾಸವೂ ದಂಡವೇ ಎನಿಸುತ್ತಿದೆ. ಪೊಲೀಸ್ ಇಲಾಖೆ ಕಳೆದೊಂದು ತಿಂಗಳಲ್ಲೇ ನಿಯಮ ಉಲ್ಲಂಘನೆ ವಿರುದ್ಧ ಕೇಸ್ ದಾಖಲಿಸಿ 17 ಲಕ್ಷ ರೂ.ದಂಡ ವಸೂಲಿ ಮಾಡಿದೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ.

ಟೆಸ್ಟ್‌ಗೆ ಜನರ ನಕಾರ: ಕರೊನಾ ನಿಯಂತ್ರಣ ದೃಷ್ಟಿಯಿಂದ ಜಿಲ್ಲಾಡಳಿತ ಕರೊನಾ ತಪಾಸಣೆ ಪ್ರಮಾಣ ಹೆಚ್ಚಿಸಿದೆ, ಸರ್ಕಾರ ನಿಗದಿಪಡಿಸಿದ ಗುರಿ ಮೀರಿ ಟೆಸ್ಟ್ ನಡೆಸುತ್ತಿದ್ದರೂ ಅನೇಕ ಕಡೆಗಳಲ್ಲಿ ತಪಾಸಣೆಗೆ ಜನ ಹಿಂದೇಟು ಹಾಕುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಜತೆಗೆ ಜಟಾಪಟಿ ನಡೆಯುತ್ತಿರುವುದು ಕಂಡುಬರುತ್ತಿದೆ.

ಶಕ್ತಿ ಕೇಂದ್ರದಲ್ಲೇ ಉಲ್ಲಂಘನೆ: ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನದಲ್ಲೇ ಕರೊನಾ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ. 38ಕ್ಕೂ ಹೆಚ್ಚು ಇಲಾಖೆಗಳು ಕಾರ್ಯನಿರ್ವಹಿಸುವ ಭವನದಲ್ಲಿ ಪ್ರತಿನಿತ್ಯ ಸಿಬ್ಬಂದಿ ಸೇರಿ ಸಾವಿರಾರು ಜನರ ಓಡಾಟವಿದೆ. ಇಲ್ಲಿಯೂ ಜನ ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು, ಮಾಸ್ಕ್ ಧರಿಸದಿರುವುದು ಸಾಮಾನ್ಯವಾಗಿದೆ.

ಇನ್ನು ಸರಕು ಸಾಗಣೆ ವಾಹನಗಳಲ್ಲೇ ಜನರನ್ನು ಕುರಿಗಳಂತೆ ತುಂಬಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಆಟೋ ಮತ್ತಿತರ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಒಬ್ಬರು ಮತ್ತೊಬ್ಬರಿಗೆ ತಾಗಿಕೊಂಡೆ ಪ್ರಯಾಣ ಮಾಡುವುದು ಕಂಡುಬರುತ್ತಿದೆ.

ಹಳ್ಳಿಗಳಲ್ಲಿ ಏನೇನೂ ಇಲ್ಲ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕರೊನಾ ನಿಯಮ ಪಾಲನೆ ಬಗ್ಗೆ ಕಾಳಜಿ ವಹಿಸುತ್ತಿರುವ ಜಿಲ್ಲಾಡಳಿತ ಹಳ್ಳಿಗಳನ್ನು ನಿರ್ಲಕ್ಷಿಸಿದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಇದ್ಯಾವುದರ ಪರಿವಿಯೇ ಇಲ್ಲದಂತ ದೃಶ್ಯ ಕಂಡುಬರುತ್ತಿದೆ.

ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ನಿಗದಿತ ಗುರಿಗಿಂತ ಹೆಚ್ಚು ಮಂದಿಯನ್ನು ಪ್ರತಿನಿತ್ಯ ಕರೊನಾ ತಪಾಸಣೆಗೊಳಪಡಿಸಲಾಗುತ್ತಿದೆ. ನಿಯಮ ಉಲ್ಲಂಘನೆ ವಿರುದ್ಧ ಪ್ರಕರಣ ದಾಖಲಿಸಿ ದಂಡ ಪ್ರಯೋಗವೂ ನಡೆಯುತ್ತಿದೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದರೆ ಮಾತ್ರ ಕರೊನಾ ನಿಯಂತ್ರಣ ಸಾಧ್ಯ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಪತ್ತೆಮಾಡಿ ಪರೀಕ್ಷೆಗೊಳಪಡಿಸುವುದು ಸವಾಲಾಗಿದೆ. ಅಂಥ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ತಪಾಸಣೆಗೆ ಮುಂದೆ ಬರಬೇಕು. ಸಮುದಾಯದಲ್ಲಿ ಸೋಂಕು ಹರಡುತ್ತಿರುವುದರಿಂದ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಕೈಗೊಳ್ಳುತ್ತಿದೆ. ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತಿಮುಖ್ಯ. ಡಾ.ಮಂಜುಳಾ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಹೋಂ ಐಸೋಲೇಷನ್‌ನಲ್ಲಿರುವವರು ಮನೆಯಲ್ಲಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ತಂಡ ರಚಿಸಲಾಗಿದೆ. ಸೋಂಕಿನಿಂದ ಗುಣಮುಖರಾದವರ ಮನೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಬಗ್ಗೆಯೂ ನಿಗಾವಹಿಸುತ್ತಿದ್ದು ಜಿಲ್ಲಾಡಳಿತದಿಂದ ಕರೊನಾ ನಿಯಂತ್ರಣಕ್ಕೆ ಎಲ್ಲ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ಸ್ವಯಂ ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲಾಡಳಿತದ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಡಾ.ಜಗದೀಶ್ ಕೆ.ನಾಯಕ್, ಬೆಂಗಳೂರು ಗ್ರಾಮಾಂತರ ಕರೊನಾ ನಿಯಂತ್ರಣಕ್ಕೆ ಮಾಸ್ಕ್ ಧಾರಣೆಯೇ ಮದ್ದು, ಆದರೆ ಜನರು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ, ರೋಗ ನಿರೋಧಕ ಶಕ್ತಿ ಇದೆ, ನಾನು ವಯಸ್ಕ ನನಗೆ ಕರೊನಾ ಏನು ಮಾಡಲು ಸಾಧ್ಯವಿಲ್ಲ ಎಂಬ ಭಂಡ ಧೋರಣೆ ಹೆಚ್ಚಾಗಿದೆ, ತಿಳುವಳಿಕೆ ಹೇಳುವವರನ್ನೇ ಲೇವಡಿ ಮಾಡುವವರು ಹೆಚ್ಚಾಗಿದ್ದಾರೆ. ಇಂಥ ಧೋರಣೆಯಿಂದ ಹೊರಬಂದು ಕರೊನಾ ಮಾರಿ ಬಡಿದೋಡಿಸಲು ಜನರು ಹೆಚ್ಚು ಜಾಗೃತರಾಗಬೇಕು. ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ

ಕುಂದಾಣದಲ್ಲಿ ಅಧಿಕಾರಿಗಳೇ ಸುಸ್ತು: ಎಷ್ಟೇ ಜಾಗೃತಿ ಮೂಡಿಸಿದರೂ, ದಂಡ ಪ್ರಯೋಗಿಸಿದರೂ ಜನ ಎಚ್ಚೆತ್ತುಕೊಳ್ಳದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಅಧಿಕಾರಿಗಳೇ ಕೈಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯಲ್ಲಿ ಕರೊನಾ ನಿಯಮ ಉಲ್ಲಂಘನೆ ಅವ್ಯಾಹತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net