ಸಹಜ ಹೆರಿಗೆ ಪ್ರಮಾಣ ಹೆಚ್ಚಿಸಿ

02TMK_DC_Heath_Meeti
Published on

ತುಮಕೂರು: ವೈದ್ಯಕೀಯ ಪೂರ್ವ ಅನುಮತಿಯಿಲ್ಲದೆ ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡದೆ, ಸಹಜ ಹೆರಿಗೆ ಪ್ರಮಾಣ ಹೆಚ್ಚಿಸಬೇಕು, ತಾಯಿ ಮಕ್ಕಳ ಮರಣ ಪ್ರಮಾಣ ಶೂನ್ಯಕ್ಕಿಳಿಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ತಾಲೂಕುಗಳಲ್ಲಿಯೂ ಗರ್ಭಿಣಿ ಮಹಿಳೆಯರ ನೋಂದಣಿ ಕಡ್ಡಾಯ ಮಾಡಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆ ವೈದ್ಯರು ಮತ್ತು ನೌಕರರು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿ ಲಭ್ಯವಿರುವ ಮೂಲಕ ಸದಾಕಾಲ ಜನರ ಸೇವೆಗೆ ಸಿದ್ಧರಿರಬೇಕು ಎಂದರು. ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಭೇಟಿ ನೀಡಿ ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣೆ ನಡೆಸಬೇಕು. ಸಮಸ್ಯೆಗಳು ಕಂಡು ಬಂದಲ್ಲಿ ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಸೇರಿಸಬೇಕು ಎಂದರು.

ಜಿಲ್ಲೆಯಲ್ಲಿ 2ಸಾವಿರ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವ್ಯಾಪ್ತಿಯ ಗರ್ಭೀಣಿ ಸ್ತ್ರೀಯರು ಮತ್ತು ಮಕ್ಕಳ ಆರೈಕೆಯ ಬಗ್ಗೆ ಹೆಚ್ಚಿನ
ಗಮನ ಹರಿಸಬೇಕು. ಗರ್ಭಿಣಿ ಸ್ತ್ರೀಯರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಸರ್ಕಾರದಿಂದ ದೊರೆಯುವ ಆರೋಗ್ಯ ಸೇವೆಗಳು ಸಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನದಾಸ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ ಇದ್ದರು.

ಸಿದ್ಧಗಂಗಾ ಮಠದಲ್ಲಿ ಯೋಗಾಥಾನ್-2022
ತುಮಕೂರು: ಶ್ರೀಸಿದ್ಧಗಂಗಾ ಮಠದಲ್ಲಿ ಸೆ.17ರಂದು ಯೋಗದಿಂದ ರೋಗ ಮುಕ್ತ, ಯೋಗವನ್ನು ಸಾರಿ ವಿಶ್ವ ದಾಖಲೆ ಮಾಡೋಣ ಎಂಬ ಘೋಷ ವಾಕ್ಯದೊಂದಿಗೆ ನಡೆಯುವ ಯೋಗ ಕಾರ್ಯಕ್ರಮ ಜಿಲ್ಲೆಯಲ್ಲಿಯೂ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.ಸಾವಿರಾರು ವಿದ್ಯಾರ್ಥಿಗಳು ಸೇರಿ 15ಸಾವಿರ ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಸೂಚಿಸಿದರು. ಯೋಗ ಕಾರ್ಯಕ್ರಮದಲ್ಲಿ ವಿಶ್ವ ಯೋಗ ದಿನಾಚರಣೆ ಸಮಿತಿ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಅಶ್ವಿನಿ ಆಯುರ್ವೇದ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ಬ್ರಹ್ಮಕುಮಾರಿ ಸಂಸ್ಥೆ, ಪದವಿಧರ ಆಯುಷ್ ವೈದ್ಯರ ಸಂಘ, ಆರೋಗ್ಯ ಭಾರತಿ ಸಂಸ್ಥೆ, ಕಾಲೇಜು ಶಿಕ್ಷಣ ಸಂಸ್ಥೆಗಳು, ಜಿಲ್ಲಾ ಮಟ್ಟದ ಎಲ್ಲ ಇಲಾಖಾವಾರು ಅಧಿಕಾರಿಗಳು ಸೇರಿ ವಿವಿಧ ಸಂಸ್ಥೆಗಳು ಭಾಗವಹಿಸಲಿವೆ ಎಂದರು. ಭಾಗವಹಿಸುವ ಯೋಗಪಟುಗಳು ಡಿಡಿಡಿ.ಟಜಠಿಟ್ಞ2022.್ಚಟಞ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಶೇ.100 ಲಸಿಕಾಕರಣ ಆಗಲಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಸಕಾಲದಲ್ಲಿ ಲಸಿಕೆ ನೀಡುವುದು ಕಡ್ಡಾಯವಾಗಿರುತ್ತದೆ. ಆಯಾ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರ ಮೂಲಕ ಶೇ.100 ಲಸಿಕಾಕರಣ ಆಗುವಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net