ಸರ್ಕಾರ ಬೆಳೆಗಾರರ ನೆರವಿಗೆ ಮುಂದಾಗಲಿ

sri-3 (6)
Published on

ಶೃಂಗೇರಿ: ತಾಲೂಕಿಲ್ಲಿ ಅತಿವೃಷ್ಠಿಯಿಂದ ಅಡಕೆ, ಕಾಫಿ, ಕಾಳುಮೆಣಸು ಇತ್ಯಾದಿ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಸರ್ಕಾರ ಕೂಡಲೇ ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿ ಕೃಷಿ ಸಮಾಜದ ಪದಾಧಿಕಾರಿಗಳು ಮಂಗಳವಾರ ಉಪ ತಹಸೀಲ್ದಾರ್ ಪ್ರವೀಣ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಗೋಪಾಲ್ ಹೆಗಡೆ ಮಾತನಾಡಿ, ಬೆಳೆಗಳಿಗೆ ಹಲವು ರೋಗಗಳು ತಗುಲಿದ್ದು ಯಾವುದೇ ಔಷಧಿ ಹಾಗೂ ಉಪಕರಣಗಳನ್ನು ವಿತರಿಸಲು ಸರ್ಕಾರ ಸ್ಪಂದಿಸಿಲ್ಲ. ರೈತರು ಬೆಳೆ ಉಳಿವಿಗಾಗಿ ಸಾಲದ ಮೊರೆ ಹೋಗಿದ್ದು, ಸರಕಾರ ಸಾಲಮನ್ನಾ ಮಾಡುವ ಭರವಸೆಗಳು ಮರೀಚಿಕೆಯಾಗಿವೆ. ಪ್ರಸ್ತುತ ಕಾಡಾನೆ, ಕಾಡುಕೋಣ, ಚಿರತೆ ಇನ್ನಿತರ ಕಾಡುಪ್ರಾಣಿಗಳಿಂದ ರೈತರ ಬೆಳೆ ನಾಶವಾಗುತ್ತಿದೆ. ಕಾಡು ಪ್ರಾಣಿಗಳನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಪ್ರತಿನಿಧಿ ಮಿಗಿನಕಲ್ಲು ವೆಂಕಟೇಶ್‌ಭಟ್ ಮಾತನಾಡಿ, ಕೃಷಿಗಾಗಿ 1998ರಲ್ಲಿ ರೈತರು ಒತ್ತುವರಿ ಜಮೀನಿನ ಮಂಜೂರಾತಿಗಾಗಿ ಅರ್ಜಿ ನಮೂನೆ 50 ರಿಂದ 57 ರವರೆಗೆ ಸಲ್ಲಿಸುತ್ತಾರೆ. ಜಮೀನಿನ ಮಂಜೂರಾತಿ ವಿಚಾರದಲ್ಲಿ 27-28 ವರ್ಷಗಳಿಂದ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೃಷಿಯನ್ನೇ ಅವಲಂಬಿಸಿರುವ ಕುಟುಂಬದ ಯುವಕರು ನಗರದ ಕಡೆ ವಲಸೆ ಹೋಗುತ್ತಿದ್ದಾರೆ ಎಂದರು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಶ್ರೀಧರ್ ಮಾತನಾಡಿ, ಅತಿವೃಷ್ಠಿ ಮತ್ತು ಅನಾವೃಷ್ಠಿ ಸಮಯದಲ್ಲಿ ಸರ್ಕಾರ ಬೆಳೆವಿಮೆ ಸೌಲಭ್ಯ ನೀಡಿದೆ. ಖಾಸಾಗಿ ವಿಮಾ ಕಂಪನಿಗಳ ಬೇಜಬ್ದಾರಿ ವರ್ತನೆಯಿಂದ ತಾಲೂಕಿನ ರೈತರು ವಿಮಾ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ದೂರಿದರು.

ಕಾರ್ಯದರ್ಶಿ ಹೆಚ್.ಟಿ.ಮಂಜುನಾಥ್, ಕೋಶಾಧ್ಯಕ್ಷೆ ಹೆಚ್.ಟಿ.ಶೈಲಾವತಿ, ಸದಸ್ಯರಾದ ಎಂ.ಕೆ.ಆಶೋಕ್, ಚಂದ್ರಶೇಖರ್,ಪುಟ್ಟಪ್ಪಹೆಗಡೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net