

ಮಾನ್ವಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಬಿಡಾಡಿ ದನಗಳನ್ನು ಪುರಸಭೆ ಗೋಶಾಲೆಗೆ ಬಿಡಲು ಮುಂದಾಗಿದೆ.
ವಿವಿಧ ರಸ್ತೆಗಳ ಮಧ್ಯೆ ಬಿಡಾಡಿ ದನಗಳು ನಿಲ್ಲುವುದು, ಮಲಗುವುದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಹಲವು ಸಲ ಜಗಳ ಕಾದು ಅಪಘಾತಗಳಿಗೂ ಕಾರಣವಾಗಿವೆ. ಅಲ್ಲದೆ ಕೆಲ ವಾಹನಗಳು ಏಕಾಏಕಿ ರಸ್ತೆಗೆ ಅಡ್ಡ ಬಂದ ದನಗಳನ್ನು ಡಿಕ್ಕಿ ಹೊಡೆದುಕೊಂಡು ಹೋದ ಉದಾಹರಣೆಗಳೂ ಇವೆ.
ಹೀಗಾಗಿ ಪುರಸಭೆ ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಮಾಲೀಕರಿಗೆ ಹಲವು ಸಲ ನೋಟಿಸ್ ನೀಡಿತ್ತು. ಆದರೆ, ನಿರ್ಲಕ್ಷೃ ತೋರಿದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸೂಚನೆ ಮೇರೆಗೆ ಬಿಡಾಡಿ ದನಗಳನ್ನು ಗೋಶಾಲೆಗೆ ರವಾನಿಸಲಾಗುತ್ತಿದೆ ಎಂದು ಆಹಾರ ನಿರೀಕ್ಷಕ ಮಹಾಂತೇಶ ಕುಮಾರ ತಿಳಿಸಿದರು.