ಗೋರಖ್‌ಪುರಕ್ಕೆ ತೆರಳಿದ ಶ್ರಮಿಕರು

010101
Published on

ಬೆಳಗಾವಿ: ಲಾಕ್‌ಡೌನ್ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿ ಬೆಳಗಾವಿ ನಗರದಲ್ಲಿದ್ದ 1,700ಕ್ಕೂ ಅಧಿಕ ಶ್ರಮಿಕ ವರ್ಗದ ಜನರು ಶನಿವಾರ ಬೆಳಗಾವಿ- ಗೋರಖ್‌ಪುರ ವಿಶೇಷ ರೈಲು ಮೂಲಕ ತಮ್ಮ ಊರುಗಳಿಗೆ ತೆರಳಿದರು. ಅಲ್ಲದೆ, ನೆರೆಯ ಗೋವಾ ರಾಜ್ಯದಿಂದ 250ಕ್ಕೂ ಅಧಿಕ ಶ್ರಮಿಕರು ಬೆಳಗಾವಿ ನಗರಕ್ಕೆ ಶನಿವಾರ ಆಗಮಿಸಿದರು.

ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳಲು ಶನಿವಾರ ನಗರದ ಸಿಪಿಇಡಿ ಮೈದಾನದಲ್ಲಿ 2 ಸಾವಿರಕ್ಕೂ ಅಧಿಕ ಜನರು ಜಮಾಯಿಸಿದ್ದರು. ಅದರಲ್ಲಿ ನೇರವಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ 1,700ಕ್ಕೂ ಅಧಿಕ ಶ್ರಮಿಕರ ಆರೋಗ್ಯ ತಪಾಸಣೆ ನಡೆಸಿದ ಕರೊನಾ ನೋಡಲ್ ಅಧಿಕಾರಿಗಳು, ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಟ್ಟರು.

ಈಗಾಗಲೇ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಶ್ರಮಿಕ ಜನರ ಅನುಕೂಲಕ್ಕಾಗಿ ಬೆಳಗಾವಿ- ಗೋರಖ್‌ಪುರ ವಿಶೇಷ ಶ್ರಮಿಕ್ ರೈಲು ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಗೋರಖ್‌ಪುರದಿಂದ ಬೆಳಗಾವಿ ನಗರಕ್ಕೆ ಬರಲು ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಶ್ರಮಿಕ ವರ್ಗದ ಜನರು ಪ್ರಯೋಜನ ಪಡೆಯುವಂತಾಗಿದೆ.

ಗೋವಾ ಸೇರಿ ವಿವಿಧ ರಾಜ್ಯಗಳಿಂದ ನಿತ್ಯ ನೂರಾರು ಶ್ರಮಿಕ ವರ್ಗದ ಜನರು ಬೆಳಗಾವಿ ನಗರಕ್ಕೆ ಬರುತ್ತಿದ್ದಾರೆ. ಅವರಲ್ಲಿ ಕೆಲವರು ಬೆಂಗಳೂರು, ಮೈಸೂರು, ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಗೆ ಹೋಗುವವರಿದ್ದಾರೆ. ಅವರೆಲ್ಲರ ತಪಾಸ ನಡೆಸಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ನೋಡಲ್ ಅಧಿಕಾರಿ ಎಸ್.ಬಿ. ದೊಡ್ಡಗೌಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net