ಸಿಂಧನೂರು: ತಾಲೂಕಾದ್ಯಂತ ಸೊಳ್ಳೆಗಳ ಕಾಟ ವಿಪರೀತವಾಗಿದ್ದು ಜನರು ಸುಸ್ತಾಗಿದ್ದಾರೆ. ಸಂಜೆಯಾದರೆ ಸೊಳ್ಳೆಗಳ ಕಡಿತಕ್ಕೆ ಕಾಲು-ಕೈ ತುರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕಳೆದ ಹದಿನೈದು ದಿನಗಳಿಂದ ಸೊಳ್ಳೆಗಳ ಕಾಟ ಹೆಚ್ಚಿದೆ.
ಮದುವೆ, ಇತರ ಕಾರ್ಯಕ್ರಮ ಸ್ಥಳಗಳಲ್ಲಿ ಸಂಜೆ ವೇಳೆ ಪಾಲ್ಗೊಳ್ಳುವುದೇ ಕಷ್ಟವಾಗಿದೆ. ಮೈ-ಕೈ ತುರಿಸಿಕೊಂಡು ಸಮಾಧಾನ ಪಟ್ಟುಕೊಳ್ಳದ ಸ್ಥಿತಿಯಿದೆ. ಇದರೊಂದಿಗೆ ಸಾಂಕ್ರಾಮಿಕ ರೋಗಗಳಿಗೆ ಹೆದರುವ ಪರಿಸ್ಥಿತಿ ಬಂದಿದೆ. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಜನರು ಶಾಂಪೂ, ತೈಲ ಹಚ್ಚಿಕೊಳ್ಳುತ್ತಿದ್ದಾರೆ.
ಮದುವೆ ಸಮಾರಂಭ, ಇತರ ಕಾರ್ಯಕ್ರಮಗಳಲ್ಲೂ ಈ ಕ್ರಮ ಅನುಸರಿಸುತ್ತಿದ್ದಾರೆ. ‘ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಳೆದ ವಾರದಿಂದ ಶಾಂಪೂ, ತೈಲವನ್ನು ಕೈ-ಮೈಗೆ ಹಚ್ಚಿಕೊಂಡು ಸೊಳ್ಳೆಗಳಿಂದ ತಪ್ಪಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಮುಕ್ಕುಂದ ನಿವಾಸಿ ಚಾಗೇಶ.