ಸರ್ಕಾರದ ಸೌಕರ್ಯ ಪಡೆಯಲು ಮುಂದಾಗಿ

18 UJJANI 01
ನಿಂಬಳಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಶಾಸಕರು ಮನೆ ಬಾಗಿಲಿಗೆ ನಮ್ಮ ಸರ್ಕಾರ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ತಹಸೀಲ್ದಾರ್ ಜಿ.ಕೆ.ಅಮರೇಶ, ತಾಪಂ ಇಒ ಡಾ.ಆನಂದ್‌ಕುಮಾರ್, ಗ್ರಾಪಂ ಅದ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷೆ ಮಲ್ಲಮ್ಮ ಇತರರಿದ್ದರು.
Published on

ಉಜ್ಜಿನಿ:ಸರ್ಕಾರ ಪ್ರತಿ ಹಳ್ಳಿಗಳ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.

ನಿಂಬಳಗೆರೆ ಗ್ರಾಮದಲ್ಲಿ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಕ್ಷೇತ್ರದ ಪ್ರತಿ ಜನರ ಆರೋಗ್ಯದ ಕಾಳಜಿಗೆ ಆದ್ಯತೆ ನೀಡಲಾಗುವುದು. ಕ್ಷೇತ್ರದ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ 1.85 ಕೋಟಿ ರೂ.ಗಳಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು. ಕೂಡ್ಲಿಗಿ ಕ್ಷೇತ್ರದ ಹೆಚ್ಚಿನ ವಿದ್ಯಾರ್ಥಿಗಳು ಕೊಟ್ಟೂರಿನಲ್ಲಿ ಪದವಿ ವ್ಯಾಸಂಗಕ್ಕೆ ಹೋಗುತ್ತಿರುವುದರಿಂದ ಮೆಟ್ರಿಕ್ ನಂತರದ ಹಾಸ್ಟೆಲ್‌ನ್ನು ಕೊಟ್ಟೂರಿನಲ್ಲಿ ನಿರ್ಮಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ತಾಲೂಕಿನ ಮೂರು ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 4-5 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿಸಲಾಗುವುದು. ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಏಕಲವ್ಯ ವಸತಿ ಶಾಲೆ ಮಂಜೂರು ಮಾಡುವಂತೆ ಮಾಡಿದ್ದ ಮನವಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದರು.

ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ರಾಜವಾಳ ಬಳಿ ವಿದ್ಯುತ್ ಕಾಮಗಾರಿಯೂ ಪೂರ್ಣಗೊಂಡು ಪ್ರಾಯೋಗಿಕವೂ ನಡೆದಿದೆ. ನ.9ರಂದು ಕೂಡ್ಲಿಗಿಯಲ್ಲಿ ನಡೆಯವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಹಾಗೂ ಅನೇಕ ಸಚಿವರು ಪಾಲ್ಗೊಂಡು ಯೋಜನೆಗೆ ಚಾಲನೆ ನೀಡುವರು ಎಂದು ಹೇಳಿದರು.

ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ ಮಾತನಾಡಿ, ಶಾಸಕರ ದೂರದೃಷ್ಟಿ ಹಾಗೂ ಅಭಿವೃದ್ಧಿ ಕನಸಿನ ಫಲವಾಗಿ ಕಸಾಪುರದಲ್ಲಿ ಶೇಂಗಾ ಹಾಗೂ ಹುಣಸೆ ಸಂಸ್ಕರಣಾ ಘಟಕ ಸ್ಥಾಪನೆಯಾಗಿದೆ. ಆರೋಗ್ಯ, ಶಿಕ್ಷಣ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಶಾಸಕರು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದರು.

ಸದಸ್ಯರಾದ ಬಸವರಾಜ, ಉಮೇಶ, ಎಂ.ಸಿದ್ದಪ್ಪ, ಗಂಗಮ್ಮ ಮುಖಂಡರಾದ ಎಸ್.ರಾಜೇಂದ್ರಪ್ರಸಾದ್, ಜಿಲಾನ್ ಬಾಷಾ, ಕಲ್ಲೇಶಪ್ಪ, ಚನ್ನಬಸವನಗೌಡ, ಮಹಾಂತೇಶ, ಮಲ್ಲಿಕಾರ್ಜುನ ವಿಜಯ, ರಾಜಶೇಖರ, ಈಶಣ್ಣ, ಸುರೇಶ, ಚಿನ್ನಪ್ಪ ಇತರರು ಇದ್ದರು.

ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಎಂಎಲ್‌ಎ : ನಿಂಬಳಗೇರೆ ಗ್ರಾಮದಲ್ಲಿ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ಸರ್ಕಾರದ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಸ್ವತಹ ಸಲಿಕೆ, ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಕೈಗೊಂಡರು. ತಹಸೀಲ್ದಾರ, ತಾಪಂ ಇಒ, ಗ್ರಾಪಂ ಸದಸ್ಯರು, ಸಿಬ್ಬಂದಿ, ನರೇಗಾ ಕೂಲಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಶಾಸಕರಿಗೆ ಕೈ ಜೋಡಿಸಿದರು. ಕಂದಾಯ ಇಲಾಖೆಗೆ 33, ಜೆಸ್ಕಾಂನ 5, ತಾಪಂನ 52, ತೋಟಗಾರಿಕೆ 5 ಸೇರಿದಂತೆ ಇತರೆ ಇಲಾಖೆಗಳಿಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net