

ಸಿಂಧನೂರು: ಮಕ್ಕಳು ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡರೆ ಉತ್ತಮ ಬರಹಗಾರರಾಗಲು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ಶಿವಲಿಂಗಪ್ಪ ಹಂದಿಹಾಳ ಹೇಳಿದರು.
ಇದನ್ನೂ ಓದಿ:ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ಅಗತ್ಯ
ನಗರದ ರಡ್ಡಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತ್ಯ ಓದುವ ಮೂಲಕ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸಲು ಮುಂದಾಗಬೇಕು. ಮಕ್ಕಳ ಸಾಹಿತ್ಯಕ್ಕೆ ರಾಯಚೂರು ಜಿಲ್ಲೆಯ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿದೆ. ಮಕ್ಕಳಿಗೆ ಸಾಹಿತ್ಯ ಓದಲು ಜಾಗೃತಿ ಮೂಡಿಸಬೇಕು ಎಂದರು.
ಮಕ್ಕಳ ಸಾಹಿತಿ ಮಂಡಲಗಿರಿ ಪ್ರಸನ್ನ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯವನ್ನು ಮುಂದುವರಿಸುತ್ತಿರುವ ಶಂಕರ ದೇವರು ಹಿರೇಮಠ ಅವರ ಕಾರ್ಯ ಶ್ಲಾಘನೀಯ ಎಂದರು. ‘ನಾವು ಭಾರತೀಯರು ವೀರಕನ್ನಡಿಗರು’ ಮಕ್ಕಳ ಕಥಾ ಸಂಕಲನ ಬಿಡುಗಡೆ ಮಾಡಲಾಯಿತು. ಮಕ್ಕಳ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಕವನ ವಾಚನ ಮಾಡಿದರು.
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ತಿಮ್ಮಯ್ಯಶೆಟ್ಟಿ, ತಾಲೂಕು ಅಧ್ಯಕ್ಷೆ ರೇಷ್ಮಾ ಕಂದಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಲೇಖಕ ಶಂಕರ ದೇವರು ಹಿರೇಮಠ, ರಡ್ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲನಗೌಡ ಕನ್ನಾರಿ, ಪ್ರೌಢಶಾಲೆ ಮುಖ್ಯಶಿಕ್ಷಕ ನಾಗೇಶ್ ಹೇರೂರು, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ ಇತರರಿದ್ದರು.