ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ: ಸಮ್ಮೇಳನಾಧ್ಯಕ್ಷ ಚಲಪತಿಗೌಡ ಆಗ್ರಹ

.jpg
Published on

ಶ್ರೀನಿವಾಸಪುರ: ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಆಗ್ರಹಿಸಿದರು.

ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದರು. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕನ್ನಡ ಮಾದರಿ ಶಾಲೆಗಳನ್ನು ಆರಂಭಿಸುವುದರ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಕ್ಯಾತೆ ಹೆಚ್ಚಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ತೆಗೆದುಕೊಳ್ಳಲು ಮಹಾಜನ್ ವರದಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ: ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕದ ಉದ್ದೇಶ ಹಾಗೂ ಗುರಿಗಳನ್ನು ಕನ್ನಡಿಗರಿಗೆ ಅನುಕೂಲವಾಗುವಂತೆ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಬೇಕು ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.

ತೆಲುಗು, ಕನ್ನಡ ಸಮನ್ವಯದ ನಾಡು: ಕೆಸಿ ವ್ಯಾಲಿ ಯೋಜನೆಯಿಂದಾಗಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಮಾವು, ಟೊಮ್ಯಾಟೊ, ತರಕಾರಿ ಬೆಳೆಗಳಿಗೆ ನೀರಾವರಿ ಯೋಜನೆ ಅನುಕೂಲವಾಗಿದೆ. ಉನ್ನತ ಹುದ್ದೆಗಳನ್ನು ನಿರ್ವಹಿಸುವ ಮೂಲಕ ತಾಲೂಕಿನ ಅಧಿಕಾರಿಗಳು ಜನಪ್ರಿಯರಾಗಿದ್ದಾರೆ. ತೆಲುಗು ಮತ್ತು ಕನ್ನಡ ಸಮನ್ವಯತೆಯ ಹೆಗ್ಗುರುತಾಗಿ ಶ್ರೀನಿವಾಸಪುರ ತಾಲೂಕು ಉಳಿದಿದೆ ಎಂದು ಚಲಪತಿಗೌಡ ಹೇಳಿದರು.

ಮಾನವೀಯ ಸಮಾಜ ಕಟ್ಟಿ: ನಾಟಕಕಾರ ಹಾಗೂ ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಬತ್ತಿದೆಯಾದರೂ ಅದನ್ನು ಮಾನವೀಯತೆ ಮೂಲಕ ತುಂಬಬೇಕಿದೆ. ಕನ್ನಡ ಪರಂಪರೆಯಿಂದ ಬಂದಿರುವ ನಾವು ಮಾನವೀಯತೆಯ ಸಮಾಜ ಕಟ್ಟಬೇಕಿದೆ. ಮನುಷ್ಯತ್ವ ಬೆಳೆಸುವಲ್ಲಿ ನಾವು ಸೋತಿದ್ದೇವೆ ಎಂದು ವಿಷಾದಿಸಿದರು.ಕೇಳಿಸಿಕೊಳ್ಳುವವರ ಅಗತ್ಯವಿದೆ: ಮಾತನಾಡುವವರೇ ಹೆಚ್ಚಾಗಿದ್ದು, ಕೇಳುವವರೇ ಕಡಿಮೆಯಾಗುತ್ತಿದ್ದಾರೆ. ಕನ್ನಡವನ್ನು ಮಾತಾಡಿ, ಮಾತನಾಡಿಸಬೇಕಿದೆ. ಮಾತನಾಡುವ ಶಿಕ್ಷಕರು, ಕೇಳಿಸಿಕೊಳ್ಳುವ ವಿದ್ಯಾರ್ಥಿಗಳ ಅವಶ್ಯವಿದೆ. ಮಾನವೀಯತೆ ಮೂಡಿಸುವಲ್ಲಿ ಶಿಕ್ಷಣ ಸೋತಿದೆ. ನಾವು ಸ್ವಾತಂತ್ರ್ಯ ಪಡೆದೆವು. ಆದರೆ ನಮಗೆ ದಾರಿ ಗೊತ್ತಿರಲಿಲ್ಲ. ಆ ದಾರಿಯನ್ನು ಕಂಡುಕೊಳ್ಳಲು ಸಾಹಿತ್ಯ ನೆರವಾಗುತ್ತದೆ ಎಂದು ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಒಳಿತು-ಕೆಡುಕಿನ ಸಂವಾದವೇ ಸಾಹಿತ್ಯ: ಶುದ್ಧ ರಾಜಕಾರಣ, ಶಿಕ್ಷಣ ಇಂದಿನ ನಿರೀಕ್ಷೆಯಾಗಿದೆ. ಒಳಿತು, ಕೆಡಕುಗಳ ನಡುವೆ ನಡೆಯುವ ಸಂವಾದವೇ ಸಾಹಿತ್ಯ.ರಾಕ್ಷಸರಾಗಿರುವವರನ್ನು ಮಾನವರಾಗಿಸುವುದು, ಮಾನವರಾಗಿರುವವರನ್ನು ದೈವತ್ವಕ್ಕೆ ಏರಿಸುವುದು ಸಾಹಿತ್ಯ ಮತ್ತು ಮಾನವೀಯತೆ. ದೈವತ್ವವೆಂದರೆ ಸಾಮಾಜಿಕ, ಸಾಂಸ್ಕೃತಿಕ ಹೊಣೆಗಾರಿಕೆ ನಿರ್ವಹಿಸುವುದಾಗಿದೆ ಎಂದು ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ಪಾರಂಪರಿಕ ಮಾನವೀಯತೆಗೆ ವಾರಸುದಾರರಾಗಿ
ಶಾಸಕ ಕೆ.ಆರ್.ರಮೇಶ್‌ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ, ರಾಜಕಾರಣದ ನಡುವೆ ನನ್ನ ಮಿದುಳು ಮತ್ತು ಹೃದಯ ಸಂಪರ್ಕಗೊಳ್ಳುವುದು ಕಷ್ಟವಾಗಿದೆ. ಮಾತು ಸಹೃದಯವಾಗಿರಬೇಕು. ಜ್ಞಾನ ಮತ್ತು ಶಿಕ್ಷಣ ಹಿಂದೆ ಕೆಲವರ ಸ್ವತ್ತಾಗಿತ್ತು. ಇಂದು ಅದು ಸಾರ್ವತ್ರಿಕತೆಯ ಮುಂದುವರಿಕೆಯಲ್ಲಿದೆ. ಪಾರಂಪರಿಕ ಮಾನವೀಯತೆಗೆ ನಾವು ವಾರಸುದಾರರಾಗಬೇಕು ಎಂದರು. ಟಿವಿ, ಮೊಬೈಲ್ ಮಾಧ್ಯಮಗಳು ಸ್ವಲ್ಪಮಟ್ಟಿಗೆ ಉಪಯುಕ್ತವಾಗಿದ್ದರೂ, ಮಾನವೀಯತೆಯನ್ನು ಕೊಂದಿವೆ. ತಂದೆಯ ಮಾತಿಗಾಗಿ ಹಾಗೂ ಕೊಟ್ಟ ಮಾತನ್ನು ನಡೆಸಿಕೊಳ್ಳುವ ರೀತಿಯ ರಾಮ ಸಂಸ್ಕೃತಿಯೊಂದಿಗೆ ಬಸವ, ಬುದ್ಧ, ಅಂಬೇಡ್ಕರ್, ಗಾಂಧೀಜಿ ವಿಚಾರಗಳೊಂದಿಗೆ ಮಕ್ಕಳಿಗೆ ಮಾನವೀಯ ಗುಣದ ಮಹತ್ವದ ಮನವರಿಕೆ ಮಾಡಿಕೊಡಬೇಕು ಎಂದು ರಮೇಶ್ ಕುಮಾರ್ ತಿಳಿಸಿದರು.
ಜಿಲ್ಲೆಗಿದೆ ಸಾಹಿತ್ಯ ಪರಂಪರೆ
ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ. ಗೋಪಾಲಗೌಡ ಮಾತನಾಡಿ, ಜಿಲ್ಲೆಗೆ ಹೆಮ್ಮೆಪಡುವ ಸಾಹಿತ್ಯ ಪರಂಪರೆಯಿದೆ. ಶ್ರೀನಿವಾಸಪುರ ತಾಲೂಕು ಜಿಲ್ಲಾ ಸಾಹಿತ್ಯ ಕ್ಷೇತ್ರವಾಗಿ ಬಹುವಾಗಿ ಕೊಡುಗೆ ಕೊಟ್ಟಿದೆ. ಅಂತಹವರಲ್ಲಿ ಪಾಲವೇಕರಿ ಕದಿರೀಪತಿ, ತೊರ‌್ಲ ಬಯ್ಯರೆಡ್ಡಿ, ಗುಮ್ಮರಾಜು ರಾಮಕವಿ, ಶಾಮ್‌ಭಟ್ಟ, ಸಾತವಲ್ಲಿ ವಂಶದವರು, ಪಣಸಮಾಕನಹಳ್ಳಿ ಚೌಡರೆಡ್ಡಿ ಮೊದಲಾದವರು ಇದ್ದಾರೆ ಎಂದರು.

ನಾಡಧ್ವಜವನ್ನು ಗ್ರಾಪಂ ಅಧ್ಯಕ್ಷ ಶ್ರೀರಾಮಬಾಬು, ಕಸಾಪ ತಾಲೂಕು ಅಧ್ಯಕ್ಷೆ ಪಿ.ಎಸ್.ಮಂಜುಳಾ ಪರಿಷತ್ ಧ್ವಜವನ್ನು ಹಾಗೂ ತಹಸೀಲ್ದಾರ್ ಶರೀನ್‌ತಾಜ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಆರ್.ಶಂಕರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಯೋಗೇಂದ್ರಗೌಡ, ಸಿಪಿಐ ನಾರಾಯಣ ಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುಬ್ರಮಣಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ವಿ. ನಾಗರಾಜ್, ನಿಕಟಪೂರ್ವ ಕಸಾಪ ತಾಲೂಕು ಅಧ್ಯಕ್ಷ ಕುಬೇರ್‌ಗೌಡ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಬೈರೇಗೌಡ, ಕಸಾಪ ಜಿಲ್ಲಾ ಸಂಚಾಲಕ ಡಾ.ಆರ್.ರವಿಕುಮಾರ್, ಜಿಲ್ಲಾ ಮಹಿಳಾ ಪ್ರತಿನಿಧಿ ಮಾಯಾ ಬಾಲಚಂದ್ರ, ಯಲ್ದೂರು ಹೋಬಳಿ ಅಧ್ಯಕ್ಷ ಅನಿಲ್‌ಕುಮಾರ್, ಗ್ರಾಮದ ಮುಖಂಡರಾದ ಜಯಣ್ಣ, ಗಾಜಲಪಲ್ಲಿ ಚಂದ್ರಪ್ಪ, ರಾಯಲ್ಪಾಡು ಹೋಬಳಿ ಕಸಾಪ ಅಧ್ಯಕ್ಷ ಜಾಮಕಾಯಲು ವೆಂಕಟೇಶ್, ಕಸಾಪ ಖಜಾಂಚಿ ಮುರಳೀ ಬಾಬು, ಗೌರವ ಕಾರ್ಯದರ್ಶಿ ಶ್ರೀರಾಮೇಗೌಡ, ತಾಲೂಕು ಪ್ರತಿನಿಧಿ ಶಂಕರ್ ಮತ್ತಿತರರು ಇದ್ದರು.

ಅದ್ದೂರಿ ಮೆರವಣಿಗೆ: ಸಮ್ಮೇಳನಾಧ್ಯಕ್ಷ ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಅವರನ್ನು ಜೋಡೆತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ರಮೇಶ್‌ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಕನ್ನಡಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡೊಳ್ಳುಕುಣಿತ, ಕೀಲುಕುದುರೆ ಗಾರುಡಿಬೊಂಬೆ, ತಮಟೆಗಳ ಕಲಾವಿದರು ಭಾಗವಹಿಸಿದ್ದರು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಗ್ರಾಮಸ್ಥರು ಮೆರವಣಿಗೆ ಆನಂದಿಸಿದರು.

ಕವಿಗೋಷ್ಠಿ: ಸಾಂಸ್ಕೃತಿಕ ಮುರಳಿಬಾಬು ಮತ್ತು ಶ್ರೀನಿವಾಸ್ ಅವರ ತಂಡದಿಂದ ನಾಡಗೀತೆ ಹಾಗೂ ರೈತ ಗೀತೆಗಳನ್ನು ಹಾಡಿದರು. ಶಾಲೆ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ನಡೆದವು. ಕವಿ ಕುಪ್ಪನಹಳ್ಳಿ ಬೈರಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಶಾರದಮ್ಮ, ಆನ್ಿ ಸಾಬ್, ಅರುಣ್‌ಕುಮಾರ್, ಆದಿನಾರಾಯಣಪ್ಪ, ಕಾವ್ಯಕಲ್ಪವಲ್ಲಿ, ಗಾಂಡ್ಲಹಳ್ಳಿ ಎನ್.ಚಲಪತಿ, ರಾಧಾಕೃಷ್ಣ, ಪ್ರಸನ್ನಕುಮಾರ್, ವೇಣುಗೋಪಾಲ್, ಮಮತಾರಾಣಿ ತಮ್ಮ ಕವಿತೆಗಳನ್ನು ವಾಚಿಸಿದರು.

ಊಟದ ವ್ಯವಸ್ಥೆ ಅಚ್ಚುಕಟ್ಟು: ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಅಚ್ಚುಕಟ್ಟಿನ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಪೊಂಗಲ್ ಮತ್ತು ಕೇಸರಿಬಾತ್ ಮಾಡಲಾಗಿತ್ತು. ಮಧ್ಯಾಹ್ನ ತರಕಾರಿ ಬಾತ್, ಪಾಯಸ, ಮೊಸರನ್ನ ಹಾಗೂ ಅನ್ನ ಸಾಂಬಾರ್ ನೀಡಲಾಯಿತು. ಸರದಿ ಸಾಲಿನಲ್ಲಿ ನಿಂತು ಜನ ಊಟ ಸವಿದರು. ಮಕ್ಕಳು ಮರಗಳ ಕೆಳಗೆ ಕುಳಿತು ಊಟ ಸವಿದರು. ಕನ್ನಡಾಭಿಮಾನಿಗಳಿಗೆ ಊಟಕ್ಕೆ ಆಸನ ವ್ಯವಸ್ಥೆ ಮಾಡಲಾಗಿತ್ತು.

ನಾಡಿನ ಐತಿಹಾಸಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಯಲ್ದೂರು ಗ್ರಾಮದ ಕೊಡುಗೆ ಅಪಾರ. ಎಚ್. ನರಸಿಂಹಯ್ಯ ಸ್ಥಾಪಿಸಿದ ನ್ಯಾಷನಲ್ ಹೈಸ್ಕೂಲ್ ರಾಜ್ಯದ ಅನೇಕ ಕ್ಷೇತ್ರಗಳಿಗೆ ಪ್ರತಿಭಾವಂತರನ್ನು ಕೊಡುಗೆಯಾಗಿ ನೀಡಿದೆ. ಅಂಧ್ರದ ಗಡಿಭಾಗವಾಗಿರುವ ಈ ಗ್ರಾಮದಲ್ಲಿ ಕನ್ನಡದ ಕಂಪು ಪಸರಿಸಿದೆ. ಜಾನಪದ ಕ್ಷೇತ್ರದ ಹಿರಿಯರಾದ ಜೋಂಕಿಣಿ ಮುನಿಯಪ್ಪ, ಮೇಲೂರಮ್ಮ, ಕೋನಿಗ ಹನುಮಪ್ಪ, ಅರಿನಾಗನಹಳ್ಳಿ ಮುನಿವೆಂಕಟಮ್ಮ, ವಡಿಗೇರನಹಳ್ಳಿ ಪದ್ಮಶಾಲಿ ವೆಂಕಟಲಕ್ಷ್ಮಮ್ಮ ಇವರು ಮಾಡಿರುವ ಸಾಧನೆ ಸಾರ್ವಕಾಲಿಕ ಆದರ್ಶವಾಗಿದೆ.ಎಂ. ಚಲಪತಿಗೌಡ, ಸಮ್ಮೇಳನದ ಸರ್ವಾಧ್ಯಕ್ಷ ಮುಂದಿನ ದಿನಗಳಲ್ಲಿ ಕೆಸಿ ವ್ಯಾಲಿಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಬಿಡಲಾಗುವುದು. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿವೆ. ರಮೇಶ್‌ಕುಮಾರ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net