

ಕಂಪ್ಲಿ: ಸ್ವಾವಲಂಬನೆ ಜೀವನ ಸಾಗಿಸಲು ಅರ್ಹ ಫಲಾನುಭವಿಗಳಿಗೆ ಧರ್ಮಸ್ಥಳದ ಯೋಜನೆಗಳನ್ನು ತಲುಪಿಸುವಲ್ಲಿ ನಿರಂತರ ಶ್ರಮಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ಇಲ್ಲಿನ ಟ್ರಸ್ಟ್ ಕಚೇರಿಯಲ್ಲಿ ಸೋಮವಾರ ಹೊಸ ಸದಸ್ಯರ ಸೇರ್ಪಡೆ ಅಭಿಯಾನಕ್ಕೆ ಚಾಲನೆ ನೀಡಿ, ಕಂಪ್ಲಿ ತಾಲೂಕಿನಲ್ಲಿ ಕಳೆದ 11 ವರ್ಷಗಳಿಂದ 2,593 ಸ್ವಸಹಾಯ ಸಂಘಗಳನ್ನು ರಚಿಸಿದ್ದು 22,913 ಸದಸ್ಯರಿಗೆ ಸ್ವಾವಲಂಬನೆ, ಸ್ವ ಉದ್ಯೋಗಕ್ಕಾಗಿ ಆರ್ಥಿಕ ಸೌಲಭ್ಯ ಒದಗಿಸಿದೆ. ಸದಸ್ಯ ಕುಟುಂಬಗಳಿಗೆ ಕೃಷಿ ಸೇರಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ತೋರಲು ನಾನಾ ಯೋಜನೆಗಳನ್ನು ಕಲ್ಪಿಸಿದೆ. ಪ್ರಸ್ತುತ ಸಾಲಿನಲ್ಲಿ 1,006 ಸದಸ್ಯರು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂದರು.
ಟ್ರಸ್ಟ್ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಸದಸ್ಯರ ಸೇರ್ಪಡೆಯ ದಾಖಲಾತಿಗಳನ್ನು ಜಿಲ್ಲಾ ನಿರ್ದೇಶಕರಿಗೆ ಹಸ್ತಾಂತರಿಸಿದರು. ತಾಲೂಕು ವಿಚಕ್ಷಣಾಧಿಕಾರಿ ಶ್ರೀಶೈಲ, ಹಣಕಾಸು ಪ್ರಬಂಧಕ ಮುರಗೇಶ್, ಮೇಲ್ವಿಚಾರಕರಾದ ರಾಜು, ಪ್ರಭು, ಮಂಜುನಾಥ, ಮಂಜುಳಾ, ಜಯಲಕ್ಷ್ಮೀ, ಅವಿನಾಶ, ಮಹಾಂತೇಶ, ವೀರಯ್ಯ ಇತರರಿದ್ದರು.