

ಉಜ್ಜಿನಿ: ಸಮೀಪದ ನಿಂಬಳಗೆರೆ ಗ್ರಾಮದಲ್ಲಿ ಮುಖ್ಯರಸ್ತೆ ಪಕ್ಕದಲಿಯೇ ಇರುವ ವಿದ್ಯುತ್ ಪರಿವರ್ತಕದ ತಂತಿಗಳು ಜೋತುಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹೀಗಾಗಿ ಜನರು ಭಯದೊಂದಿಗೆ ಓಡಾಡುವಂತಾಗಿದೆ.
ಗ್ರಾಮದ ಪ್ರಮುಖ ರಸ್ತೆಯಲ್ಲಿ ಟಿಸಿ ಅಳವಡಿಸಲಾಗಿದೆ. ಅದರ ತಂತಿಗಳು ಕೈಗೆಟುಕುವ ಎತ್ತರದಲ್ಲಿವೆ. ಯಾರಾದರೂ ಮರೆತು ಹತ್ತಿರ ತೆರಳಿದರೆ, ಪ್ರಾಣಿಗಳು ನುಗ್ಗಿದರೆ ಅಥವಾ ಮಳೆ ಬಂದು ತಂತಿಗಳು ಬಿದ್ದು ಅನಾಹುತವಾದರೆ ಯಾರು ಹೊರೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಇನ್ನಾದರೂ ಜೆಸ್ಕಾಂ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಟಿಸಿ ಮೇಲಕ್ಕೆ ನಿಲ್ಲಿಸಿ ತಂತಿಗಳು ಕೈಗೆ ಸಿಗದಂತೆ ಎತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಜೆಸ್ಕಾಂ ಶಾಖಾ ಅಧಿಕಾರಿ ಶರಣಪ್ಪ ಪ್ರತಿಕ್ರಿಯಿಸಿ, ನಿಂಬಳಗೆರೆ ಗ್ರಾಮದಲ್ಲಿ ಟಿಸಿ ಕೆಳ ಭಾಗದಲ್ಲಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಮೇಲಕ್ಕೇರಿಸಿ, ತಂತಿಗಳು ಕೈಗೆ ಸಿಗದಂತೆ ಮಾಡಲಾಗುವುದು. ಸದ್ಯ ಕೇಬಲ್ ಇಲ್ಲ. ಬಂದ ನಂತರ ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದರು.