

ತಾಳಿಕೋಟೆ: ಪಂಚ ನದಿಗಳ ನಾಡೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಹರಿಯುವ ಡೋಣಿ ನದಿ ತುಂಬಿ ಹರಿದರೆ ಓಣಿಯಲ್ಲಾ ಜೋಳ ಎಂಬ ಹಿರಿಯರ ಮಾತು ಇಂದು ತದ್ವಿವಿರುದ್ಧವಾಗಿದೆ.
ಮಳೆ ನಿಂತರೂ ವರ್ಷಪೂರ್ತಿ ಹರಿಯುತ್ತಿದ್ದ ಡೋಣಿ ನದಿ ಈ ವರ್ಷ ಬತ್ತಿ ಹೋಗಿ ತನ್ನೊಡಲ ತುಂಬಾ ತುಂಬಿರುವ ಹೂಳಿನ ಜತೆಗೆ ಚರಂಡಿ ನೀರು ಸೇರಿದ್ದರ ಪರಿಣಾಮ ದುರ್ವಾಸನೆಯ ಬೀಡಾಗಿ ಪರಿಣಮಿಸಿದೆ. ಎಲ್ಲಿ ನೋಡಿದರೂ ರಾಶಿರಾಶಿ ಕಲ್ಲು ಚಿಪ್ಪಡಿಗಳು, ಎಲ್ಲೆಂದರಲ್ಲಿ ಬಿಸಾಡಿದ ಹರಕು ಬಟ್ಟೆಗಳ ಗಂಟುಗಳು, ಒಂದೆಡೆ ಮುಳ್ಳು ಕಂಠಿಗಳು ಬೆಳೆದು ನಿಂತಿದ್ದರೆ ಇನ್ನೊಂದೆಡೆ ಝೇಕು ತುಂಬಿಕೊಂಡಿಕೊಂಡು ಗಬ್ಬೆದ್ದು ನಾರುತ್ತಿದೆ.
ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಸೈನಿಕರು, ರಾಜರು ಆನೆ, ಕುದುರೆಗಳಿಗೆ ನಧಿಯ ದಡದಲ್ಲಿರುವ ಕಾಮನಕಲ್ಲ ಪ್ರದೇಶದಲ್ಲಿ ಮೇವಿನ ಜತೆಗೆ ನೀರು ಕುಡಿಯಲು ಉಪಯೋಗಿಸುತ್ತಿದ್ದರು ಎಂಬ ಇತಿಹಾಸವಿದೆ. ಆದರೆ ಇಂದು ಈ ನೀರು ದನಗಳು ಕುಡಿಯಲು ಯೋಗ್ಯವಿಲ್ಲದಷ್ಟು ಹದಗೆಟ್ಟಿದೆ.
ನದಿಯಲ್ಲಿ ತುಂಬಿಕೊಂಡಿರುವ ಹೂಳಿನ ಪರಿಣಾಮ ಮಳೆ ಬಂದಾಗಲ್ಲೊಮ್ಮೆ ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ಆವರಿಸಿ ಬಿತ್ತಿದ ಅಲ್ಪಸ್ವಲ್ಪ ಬೆಳೆಯೂ ಕೂಡಾ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಮಳೆಯ ಅಭಾವದಿಂದ ನದಿಗೆ ಬರದ ಛಾಯೆ ಆವರಿಸಿದ್ದು ಚರಂಡಿ ನೀರಿನ ಹೊರತು ಬೇರೆ ಯಾವ ನೀರು ಇಲ್ಲಿಗೆ ಬರುತ್ತಿಲ್ಲ. 2013ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರು ಡೋಣಿ ನದಿಯ ಹೂಳೆತ್ತಲು ಆಸಕ್ತಿ ತೋರಿದ್ದರು. ಸದನದಲ್ಲಿ ಚರ್ಚೆಯನ್ನು ಮಾಡಿದ್ದರು. ಆದರೆ ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ.
ಪಂಚನದಿಗಳ ನಾಡಾಗಿದ್ದರೂ ಮಳೆಯ ಅಭಾವದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರು ಉದ್ಯೋಗ ಅರಸಿ ಗೋವಾ, ಮುಂಬೈ, ಪುಣೆ ಸೇರಿ ಇನ್ನಿತರೆಡೆ ಗುಳೆ ಹೋಗುತ್ತಿದ್ದಾರೆ. ಹಿಂದೆ ಕುಡಿಯುವ ನೀರಿಗಾಗಿ ತುಂಬಿದ್ದ ಕೆರೆಗಳು ಖಾಲಿಯಾಗುತ್ತಿವೆ. ಮಳೆಯ ಕೊರತೆಯಿಂದ ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಮ್‌ಗಳಲ್ಲಿನ ನೀರಿನ ಮಟ್ಟ ಕುಸಿತಗೊಂಡು ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಇಲ್ಲದೇ ಡೋಣಿ ನದಿ ಬರಿದಾಗಿದೆ. ನದಿಯಲ್ಲಿ ವರ್ಷದಿಂದ ವರ್ಷಕ್ಕೆ ಹೂಳಿನ ಪ್ರಮಾಣ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಜನರಿಗೆ, ದನಕರುಗಳಿಗೆ ಕುಡಿಯಲು ಆಸರೆ ಆಗಿರುವ ಡೋಣಿ ನದಿಯಲ್ಲಿ ಹೂಳಿನಿಂದ ಗಲೀಜು ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಡೋಣಿ ನದಿ ಹೂಳೆತ್ತುವ ಕಾರ್ಯಕ್ಕೆ ಸರ್ಕಾರವು ಮುಂದಾಗಬೇಕು. ರೈತ ಕೂಲಿಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು. ಸಂಗಮೇಶ ಸಗರ, ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ