ಭೂಗಳ್ಳರ ವಿರುದ್ಧ ಶಿಸ್ತುಕ್ರಮಕ್ಕೆ ಪಟ್ಟು, ಜಿಲ್ಲಾಡಳಿತ ಭವನದ ಎದುರು ಸೋಲೂರು ಗ್ರಾಮಸ್ಥರ ಪ್ರತಿಭಟನೆ

N.5-KNDPHOTO-1A
Published on

ಬೆಂ.ಗ್ರಾಮಾಂತರ/ಕುಂದಾಣ: ಸರ್ಕಾರಿ ನೌಕರರೊಬ್ಬರು ಸರ್ಕಾರಿ ಭೂಮಿ ಕಬಳಿಸಿದ್ದು ಕೂಡಲೇ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಲೂರು ಗ್ರಾಮಸ್ಥರು ಗುರುವಾರ ಕುಂದಾಣ ಹೋಬಳಿ ಜಿಲ್ಲಾಡಳಿತಭವನದ ಎದುರು ಪ್ರತಿಭಟನೆ ನಡೆಸಿದರು.

ಸೋಲೂರು ಗ್ರಾಮದ ಸರ್ವೇ ನಂ.5ರಲ್ಲಿ 2.10 ಎಕರೆ ಸರ್ಕಾರಿ ಜಾಗವನ್ನು ಕೇಂದ್ರ ಸರ್ಕಾರಿ ನೌಕರರಾಗಿರುವ ಬೆಂಗಳೂರು ನಿವಾಸಿಯೊಬ್ಬರು ಕಬಳಿಕೆ ಮಾಡಿದ್ದಾರೆ. ಸರ್ಕಾರಿ ಖರಾಬು, ನಕಾಶೆ ರಸ್ತೆ, ರಾಜಕಾಲುವೆ, ಶಾಲಾ ಮಕ್ಕಳ ಆಟದ ಮೈದಾನ, ಗೋಗುಂಟೆಗಳಿಗೆ ಮೀಸಲಿದ್ದ ಸರ್ಕಾರಿ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮ ಉಲ್ಲಂಘಿಸಿ ಕಬಳಿಕೆ ಮಾಡಲಾಗಿದೆ. ಸರ್ಕಾರಿ ಖರಾಬು ಜಮೀನನ್ನು ಕಂದಾಯ ದಾಖಲೆಗಳಲ್ಲಿ ತಿದ್ದಿ ಅಂದಿನ ಉಪ ವಿಭಾಗಾಧಿಕಾರಿ ಮಂಜುನಾಥ್ ವರ್ಗಾವಣೆಯಾಗುವ ಒಂದೆರಡು ದಿನದ ಮೊದಲು ಖಾತೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ದೊಡ್ಡಮಟ್ಟದಲ್ಲಿ ಲಂಚ ವ್ಯವಹಾರ ನಡೆದಿದೆ ಎಂದು ಗ್ರಾಮದ ಮುಖ್ಯಸ್ಥ ಚಿಕ್ಕೇಗೌಡ ಆರೋಪಿಸಿದರು.

ಲಾಕ್‌ಡೌನ್ ವೇಳೆ ಕರಾಮತ್ತು: ಕರೊನಾ ಲಾಕ್‌ಡೌನ್ ಸಮಯದಲ್ಲಿ ಈ ಅವ್ಯವಹಾರ ನಡೆದಿದೆ. ಇಡೀ ಜಿಲ್ಲೆಯ ಜನರ ಗಮನ ಕರೊನಾ ಮೇಲಿದ್ದರೆ ಭೂಗಳ್ಳರು ಸರ್ಕಾರಿ ಭೂಮಿ ಕಬಳಿಸಲು ಈ ಸಮಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು, ಜತೆಗೆ ಇಂಥ ಅವ್ಯವಹಾರಕ್ಕೆ ಕೈಜೋಡಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇದು ಭೂಗಳ್ಳರಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಗ್ರಾಮಸ್ಥರಾದ ಬಿ.ನಾಗರಾಜು, ದೊಡ್ಡಚಿಕ್ಕಣ್ಣ, ಎನ್.ಮುನಿರಾಜಪ್ಪ, ಎಚ್.ಮುನಿಯಪ್ಪ, ರೂಪಾ, ಅಶ್ವತ್ಥಮ್ಮ, ನಳಿನಾ, ರೈತ ಮುಖಂಡರಾದ ವೆಂಕಟನಾರಾಯಣಪ್ಪ, ಎ.ರಾಮಾಂಜಿನಪ್ಪ ಮತ್ತಿತರರು ಇದ್ದರು.

ಅಧಿಕಾರಿಗಳಿಂದ ಸ್ಥಳಪರಿಶೀಲನೆ: ಈಗಾಗಲೇ ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳ ಪರಿಶೀಲಿಸುವ ಭರವಸೆ ನೀಡುತ್ತಾರೆ ಹೊರತು ಯಾರೂ ಸ್ಥಳ ಪರಿಶೀಲನೆಗೆ ಬರುತ್ತಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಬೇಕು ಎಂದು ಪ್ರತಿಭಟನಕಾರರರು ಪಟ್ಟು ಹಿಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಧಿಕಾರಿಗಳಿಗೆ ಸ್ಥಳ ಪರಿಶೀಲನೆಗೆ ಸೂಚನೆ ನೀಡಿದರು.

ಪ್ರತಿಭಟನಕಾರರೊಂದಿಗೆ ತೆರಳಿದ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿಯೊಂದಿಗೆ ಸೋಲೂರು ಗ್ರಾಮಕ್ಕೆ ತೆರಳಿದ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಅಜೀತ್ ಕುಮಾರ್ ರೈ ಮತ್ತಿತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net