

ಸವದತ್ತಿ: ಕ್ಷೇತ್ರ ಬೆಳವಣಿಗೆಗೆ ಪೂರಕವಾದ ರೈಲ್ವೆ ಮಾರ್ಗ ಜೋಡಣೆಗೆ ಸಂಪೂರ್ಣ ಬೆಂಬಲವಿದ್ದು, ರೈಲ್ವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.
ಇಲ್ಲಿನ ಗಾಂಧಿ ಚೌಕದಲ್ಲಿ ರಾಜ್ಯ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅರೆಬೆತ್ತಲೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿ ವರ್ಷ 1.40 ಕೋಟಿಗೂ ಅಧಿಕ ಭಕ್ತರು ದೇವಿ ದರ್ಶನ ಪಡೆಯುತ್ತಾರೆ. ಹಾಗಾಗಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಜತೆಗೆ ಚರ್ಚಿಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತತ್ವದಲ್ಲಿ ಮುಖ್ಯಮಂತ್ರಿ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ರೈಲ್ವೆ ಸಂಪರ್ಕಕ್ಕಾಗಿ ರಾಜ್ಯ ಸರ್ಕಾರ ಭೂಮಿ ಒದಗಿಸಿದ್ದಲ್ಲಿ ಕೇಂದ್ರ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಮಾತನಾಡಿ, ರೈಲ್ವೇ ಮಾರ್ಗಕ್ಕಾಗಿ ಅಂದಾಜು 1,667 ಕೋಟಿ ರೂ. ವೆಚ್ಚದ ಪತ್ರಿಕೆ ಸಿದ್ದವಿದೆ. ಈ ಭಾಗದ ಶಾಸಕರು ಹೆಚ್ಚಿನ ಹಿತಾಸಕ್ತಿ ತೋರಿದ್ದಲ್ಲಿ ಈ ಯೋಜನೆಗೆ ಬೇಗ ಯಶಸ್ಸು ಸಿಗಲಿದೆ ಎಂದರು.
ಖಾಜಿ ಅವರಿಗೆ ಅಂಗಿ ತೊಡಿಸುವ ಮೂಲಕ 5 ದಿನದ ಅರೆಬೆತ್ತಲೆ ಧರಣಿ ಸತ್ಯಾಗ್ರಹ ಕೊನೆಗೊಂಡಿತು. ಹೋರಾಟ ಸಮಿತಿ ಗೌರವಧ್ಯಕ್ಷರಾಗಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಮಿತಿ ತಾಲೂಕಾಧ್ಯಕ್ಷ ಆರ್.ಬಿ. ಶಂಕರಗೌಡರ, ಕ್ರುದ್ದೀನ್ ನದ್ಾ, ಅಶ್ವತ್ಥ ವೈದ್ಯ, ಜಗದೀಶ ಶಿಂತ್ರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ರೈತ ಸಂಘದ ಅಧ್ಯಕ್ಷ ಸುರೇಶ ಸಂಪಗಾವಿ, ರಾಜೇಶ್ವರಿ ರೇಣಕೆಗೌಡರ, ಬಸವರಾಜ ಬಿಜ್ಜುರ, ಬಸವರಾಜ ಪುಟ್ಟಿ, ಬಸವರಾಜ ಕಪ್ಪಣ್ಣವರ, ಶಬ್ಬೀರ್ ಬೆಣ್ಣಿ, ಮಂಜುನಾಥ್ ಪಾಚಂಗಿ, ಬಸವರಾಜ್ ಅರಮನಿ ಸೇರಿ ವಿವಿಧ ಸಂಘಟನೆಗಳಿದ್ದವು