

ಬೆಳಗಾವಿ: ಛಾಯಾಗ್ರಾಹಕರು ಕಡಿಮೆ ಸಮಯ, ಬಂಡವಾಳದಲ್ಲಿಯೇ ಲಭ್ಯ ತಂತ್ರಜ್ಞಾನವುಳ್ಳ ಕ್ಯಾಮರಾ ಬಳಸಿ ಉತ್ತಮ ಚಿತ್ರ ಸೆರೆಹಿಡಿಯುವ ಕೌಶಲ ಕರಗತ ಮಾಡಿಕೊಳ್ಳಬೇಕು ಎಂದು ಮುಂಬೈನ ಖ್ಯಾತ ಛಾಯಾಗ್ರಾಹಕ ಜಯಂತ ಪೆಡ್ನೇಕರ ಹೇಳಿದರು.
ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ ಕ್ಷೇಮಾಭಿವೃದ್ಧಿ ಸಂದಿಂದ ನಗರದ ವಿದ್ಯಾಧಿರಾಜ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನ ಉದ್ಘಾಟಿಸಿ ಮಾತನಾಡಿದ ಅವರು, ಯಾರು ಶ್ರದ್ಧೆಯಿಂದ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುತ್ತಾರೆಯೋ ಅವರು, ವೃತ್ತಿ ಜೀವನದಲ್ಲಿ ಖ್ಯಾತಿ ಪಡೆದುಕೊಳ್ಳಬಹುದು. ಸಮಯಕ್ಕೆ ಮಹತ್ವ ಕೊಟ್ಟು ತಾಳ್ಮೆರೂಢಿಸಿಕೊಂಡಾಗ ಛಾಯಾಗ್ರಹಣದಲ್ಲಿ ಪರಿಣತಿ ಸಾಧಿಸಬಹುದು. ಆಗ ನೂರಾರು ಫೋಟೋಗಳು ಹೇಳುವುದನ್ನು ಕೇವಲ ಹತ್ತೇ ಫೋಟೋಗಳಲ್ಲಿ ಹೇಳಬಹುದು. ಇವತ್ತು ಕ್ಯಾಮರಾಗಳಲ್ಲಿ ಸಾಕಷ್ಟು ಹೊಸ ತಂತ್ರಜ್ಞಾನ ಬಂದಿದ್ದರೂ, ಎಲ್ಲರೂ ಉತ್ತಮ ಫೋಟೋಗ್ರಾಫರ್, ವಿಡಿಯೋಗ್ರಾಫರ್ ಆಗಲು ಸಾಧ್ಯವಿಲ್ಲ ಎಂದರು.
ಸಾಧಕ ಹಿರಿಯ ಛಾಯಾಗ್ರಾಹಕರಾದ ಅಜಿತ್ ಔರಾದ್ಕರ್ ಮತ್ತು ಆರೀಫ್ ಪಠಾಣ್ ಅವರನ್ನು ಸಂದಿಂದ ಸನ್ಮಾನಿಸಲಾಯಿತು. ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗುರ ಹಾಗೂ ಮಂಜುನಾಥ ಆಸ್ತಿಕಟ್ಟಿ, ಕಾರ್ಮಿಕ ಕಾರ್ಡ್ ವಿತರಿಸಿ ಉಪಯೋಗ ತಿಳಿಸಿದರು. ಸಂದ ಲೆಕ್ಕಪರಿಶೋಧನೆ ವರದಿ ಓದಲಾಯಿತು. ಕೆನರಾ ಬ್ಯಾಂಕ್ ನಿರ್ದೇಶಕ ಪ್ರವಿಣ ಕೆ.ಎಸ್., ಅಮೃತ ಚರಂತಿಮಠ, ಸಂದ ಅಧ್ಯಕ್ಷ ಬಸವರಾಜ ರಾಮಣ್ಣವರ, ಕಾರ್ಯದರ್ಶಿ ಪ್ರಕಾಶ ಕಳಸದ, ರಿತೇಶ ಒಕ್ಕಲಗೌಡ, ಬಾಬಾ ರಾಮಣ್ಣವರ, ಡಿ.ಬಿ.ಪಾಟೀಲ, ಸುರೇಶ ಮುರಕುಂಬಿ, ವಿಜಯ ತುಪ್ಪದ, ನಾಮದೇವ ಕೋಳೆಕರ ಹಾಗೂ ಇತರರಿದ್ದರು.