

ಅರಕೇರಾ: ಡಾ.ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ತಹಸೀಲ್ದಾರ್ ಅಮರೇಶ ಬಿರಾದಾರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಅಸ್ಪಶ್ಯತೆ, ಅಸಮಾನತೆ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ವಿಶ್ವಗುರು ಬಸವಣ್ಣ ಮತ್ತು ಬುದ್ಧನ ಚಿಂತನೆಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ದೈನಂದಿನ ಜೀವನಕ್ಕೆ ಪ್ರತಿಯೊಬ್ಬರಿಗೂ ಸಂವಿಧಾನ ಅವಶ್ಯ. ನೊಂದ, ಶೋಷಿತ, ಹಿಂದುಳಿದ ವರ್ಗ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ನೀಡಿದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಉಪ ತಹಸೀಲ್ದಾರ್ ಮನೋಹರ ನಾಯಕ, ಕಂದಾಯ ನಿರೀಕ್ಷಕ ಬಸವರಾಜ ಹೂನೂರು, ವಿಷಯ ನಿರ್ವಾಹಕ ಕನಕರೆಡ್ಡಿ, ಗ್ರಾಮ ಆಡಳಿತಾಧಿಕಾರಿ ಕೆಂಚಬಸಪ್ಪ, ಎಜೆಎಸ್‌ಕೆ ಕಂಪ್ಯೂಟರ್ ಆಪರೇಟರ್ ವೆಂಕಟೇಶ, ಗ್ರಾಮ ಸಹಾಯಕ ಕರಿಯಪ್ಪ ಇತರರಿದ್ದರು.