

ಕುಶಾಲನಗರ: ಭಾರತೀಯ ಸಶಸ್ತ್ರ ಪಡೆಗಳಲ್ಲಿ ಬದ್ಧತೆ ಮತ್ತು ಸಮರ್ಥ ರಕ್ಷಣಾ ಅಧಿಕಾರಿಗಳಾಗಲು ನಿರ್ಣಾಯಕವಾಗಿರುವ ಅತಿ ಮುಖ್ಯ ಗುಣಗಳನ್ನು ಅರ್ಥೈಸಿಕೊಂಡು ಅದರಂತೆ ತಮ್ಮ ಭವಿಷವನ್ನು ರೂಪಿಸಿಕೊಳ್ಳಿ ಎಂದು ಭಾರತೀಯ ವಾಯು ಸೇನೆಯ ತರಬೇತಿ ಕಮಾಂಡ್ ಏರ್ ಮಾರ್ಷಲ್ ನಾಗೇಶ್ ಕಪೂರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೂಡಿಗೆಯ ಕೊಡಗು ಸೈನಿಕ ಶಾಲೆಗೆ ಶನಿವಾರ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅವರು, ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ತಮ್ಮ ಅನುಭವಗಳನ್ನು ಮತ್ತು ಒಳನೋಟಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳು ತಮ್ಮ ಜೀವನದ ಮಹತ್ವಾಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ಉತ್ಸಾಹದಿಂದ ಕಾರ್ಯಪ್ರವೃತರಾಗಬೇಕೆಂದು ಪ್ರೋತ್ಸಾಹಿಸಿದರು. ಯುಪಿಎಸ್‌ಸಿ, ಎನ್‌ಡಿಎ ಮತ್ತು ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳಿಗೆ ಹಾಗೂ ಇತರ ಸೇನಾ ಇಲಾಖೆಯ ಪ್ರವೇಶಾತಿಗಳಿಗೆ ತಯಾರು ಮಾಡುವ ಕುರಿತು ಮಾರ್ಗದರ್ಶನ ನೀಡಿದರು.
ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ಜಿತ್ ಸಿಂಗ್ ಮಾತನಾಡಿ, ಈ ಭೇಟಿಯು ಶಾಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮತ್ತು ಶೈಕ್ಷಣಿಕ ಕಲಿಕಾನುಭವವಾಗಿದೆ ಎಂದರು.
ಇದೇ ವೇಳೆ ಯುದ್ಧವೀರರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವುದರ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಬೋಧಕ- ಬೋಧಕೇತರ ವರ್ಗದವರು ಎನ್‌ಸಿಸಿ ಮತ್ತು ಪಿಐ ಸಿಬ್ಬಂದಿ ವರ್ಗ ಹಾಗೂ ಶಾಲೆಯ ವಿದ್ಯಾರ್ಥಿಗಳು ಈ ಸಂದರ್ಭ ಇದ್ದರು.