ನಾವು ಆರೋಗ್ಯಕರವಾಗಿ ಇರಬೇಕಾದರೆ ನಮ್ಮಲ್ಲಿ ಆರೋಗ್ಯಕರ ಮನಸ್ಸು ಅಗತ್ಯ : ಪ್ರೊ.ಎನ್.ಕೆ. ಲೋಕನಾಥ್ ಅಭಿಮತ

yakshama
Published on

ಮೈಸೂರು: ಸ್ವಚ್ಛತೆ ಕಾಪಾಡುವುದು ನಗರ ಪಾಲಿಕೆಯ ಜವಾಬ್ದಾರಿ ಎಂದು ತಿಳಿಯದೆ ಪ್ರತಿಯೊಬ್ಬರು ಸ್ವಚ್ಛ ನಗರ ರೂಪಿಸಲು ಸಹಕಾರ ನೀಡಬೇಕು. ನಗರ ಸ್ವಚ್ಛವಾಗಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.

ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಸ್ವಸ್ಥವೃತ್ತ ಮತ್ತು ಯೋಗ ಇಲಾಖೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ಮೈಸೂರು ವಿಶ್ವವಿದ್ಯಾಲಯ ವತಿಯಿಂದ ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಯಕ್ಷಮ ಸಂವಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ವಚ್ಛತೆ ನಮ್ಮಿಂದಲೇ ಪ್ರಾರಂಭವಾಗಬೇಕು. ಸಾಕಷ್ಟು ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿ ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡು ಬರುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಡಲು ಪ್ರತಿಯೊಬ್ಬರು ಶ್ರಮಿಸಬೇಕು. ಸಾಕಷ್ಟು ವಿದ್ಯಾವಂತರು ಮಾನಸಗಂಗೋತ್ರಿಗೆ ವಾಯು ವಿಹಾರಕ್ಕೆ ಬರುತ್ತಾರೆ. ಈ ಪೈಕಿ ಕೆಲವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಹರಡುತ್ತಿದ್ದಾರೆ. ಈ ರೀತಿ ಪರಿಸರವನ್ನು ಹಾಳು ಮಾಡಬಾರದು. ನಾವು ಆರೋಗ್ಯಕರವಾಗಿ ಇರಬೇಕಾದರೆ ನಮ್ಮಲ್ಲಿ ಆರೋಗ್ಯಕರ ಮನಸ್ಸು ಅಗತ್ಯ ಎಂದು ಹೇಳಿದರು.

ಕೋವಿಡ್ ಬರುವುದಕ್ಕಿಂತ ಮುಂಚೆ ಸಾಕಷ್ಟು ಮಕ್ಕಳಿಗೆ ವೈರಸ್ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ, ಕೋವಿಡ್ ನಂತರ ವೈರಸ್ ಹಾಗೂ ಕಾಯಿಲೆಗಳ ಕುರಿತು ಸಾಕಷ್ಟು ಅರಿವು ಮೂಡಿದೆ. ಕೆಲವು ವೈರಸ್ ನಮಗೆ ಒಳ್ಳೆಯದ್ದು ಮಾಡುತ್ತದೆ, ಕೆಲವು ವೈರಸ್ ನಮಗೆ ಮಾರಕವಾಗಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ಕಿದ್ವಾಯಿ ಮಾಜಿ ನಿರ್ದೇಶಕಿ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ‘ಅಭಿನವ ಧನ್ವಂತ್ರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ. ಶೇಖರ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಬಿ.ಎಸ್. ಪ್ರಸಾದ್, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜ್‌ಕುಮಾರ್ ಎಚ್. ಗರಮಪಲ್ಲಿ, ತಜ್ಞವೈದ್ಯ ಡಾ.ಕೆ.ಮಧು, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮ್‌ರಾವ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net