

ಸಂಡೂರು: ಆಶಾ ಕಾರ್ಯಕರ್ತೆಯರಿಗೆ ಏನೇ ಬಿರುದು, ಸನ್ಮಾನ ಲಭಿಸಿದರೂ ಅವರ ಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ ಎಂದು ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಎ.ಶಾಂತಾ ಹೇಳಿದರು.
ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದರು.
ಅತ್ಯಂತ ಕನಿಷ್ಟ ವೇತನಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಪ್ರೋತ್ಸಾಹ ಧನದ ಹೆಸರಲ್ಲಿ ಶೋಷಣೆ ನಿರಂತರವಾಗಿ ನಡೆಯುತ್ತಿದೆ. 10-15 ವರ್ಷಗಳಿಂದ ದುಡಿಯುತ್ತಿದ್ದರೂ ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ತಯಾರಿಲ್ಲ. ಕನಿಷ್ಟ ಪಕ್ಷ ಕಾರ್ಮಿಕರೆಂದು ಪರಿಗಣಿಸಲು ಸಹ ಮೀನಮೇಷ ಎಣಿಸುತ್ತಿದೆ. ಹಾಗಾಗಿ ಅವರು ಅಭದ್ರತೆಯಲ್ಲಿ ಜೀವನ ನಡೆಸುವಂತಾಗಿದೆ ಎಂದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಎನ್.ಪ್ರಮೋದ್ ಮಾತನಾಡಿ, ಎಲ್ಲ ಸರ್ಕಾರಗಳು ಕಾರ್ಮಿಕರ ಹಿತ ಬಿಟ್ಟು ಉದ್ಯಮಿಗಳ ಸೇವೆ ಮಾಡುತ್ತ ಬಂದಿವೆ. ಹೋರಾಟದಿಂದ ಗಳಿಸಿಕೊಂಡ ಕಾರ್ಮಿಕ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ತಾಲೂಕು ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯ ಮೇಲೆ ವೀರಮ್ಮ, ಪಾಪಮ್ಮ, ಶಾಂತಮ್ಮ ಇತರರಿದ್ದರು. ಸಮ್ಮೇಳನದ ಕೊನೆಯಲ್ಲಿ ಹೊಸ ತಾಲೂಕು ಸಮಿತಿ ರಚಿಸಲಾಯಿತು. ಜಲಜಾಕ್ಷಿ (ಗೌರವಾಧ್ಯಕ್ಷೆ), ವೀರಮ್ಮ(ಅಧ್ಯಕ್ಷೆ), ಶಾಂತಮ್ಮ (ಕಾರ್ಯದರ್ಶಿ), ಭಾಗ್ಯಮ್ಮ, ಪಾಪಮ್ಮ, ಸೌಭಾಗ್ಯ (ಉಪಾಧ್ಯಕ್ಷರಾಗಿ), ಶಾಹಿರಾ ಬೀ, ಬಸಮ್ಮ, ಜಲಜಾಕ್ಷಿ, ಹನುಮಂತಮ್ಮ ಅವರನ್ನು ಆಯ್ಕೆ ಮಾಡಲಾಯಿತು.