ಕರ್ನಾಟಕ-ಆಂಧ್ರಪ್ರದೇಶ ಗಡಿ; ಮರು ಗುರುತಿಗೆ ನಾಳೆ ಸರ್ವೇ ಶುರು..

Car
Published on

ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶ ನಡುವಿನ ಗಡಿ ಗುರುತು ಖಚಿತಪಡಿಸುವ ಸರ್ವೇ ಕಾರ್ಯ ಶುಕ್ರವಾರದಿಂದಲೇ ಆರಂಭವಾಗಲಿದೆ. ಸುಪ್ರೀಂಕೋರ್ಟ್​ ನಿರ್ದೇಶನದ ಹಿನ್ನೆಲೆಯಲ್ಲಿ ಈ ಸರ್ವೇ ನಡೆಯಲಿದೆ ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಕಾನೂನುಬಾಹಿರ ಗಣಿಗಾರಿಕೆಯಿಂದಾಗಿ ಬಳ್ಳಾರಿಯ ರಕ್ಷಿತಾರಣ್ಯದೊಳಗಿನ ಕರ್ನಾಟಕ-ಆಂಧ್ರಪ್ರದೇಶವನ್ನು ಪ್ರತ್ಯೇಕಿಸುವ ಗಡಿ ಗುರುತು ಕಾಣೆಯಾಗಿದೆ. ಅಕ್ರಮ ಗಣಿಗಾರಿಕೆ ಕುರಿತು ನಿವೃತ್ತ ನ್ಯಾ.ಎನ್​. ಸಂತೋಷ್​ ಹೆಗ್ಡೆ ಅವರು ಸಲ್ಲಿಸಿದ್ದ ವರದಿಯಲ್ಲಿ ಈ ವಿಷಯವನ್ನೂ ಉಲ್ಲೇಖಿಸಿದ್ದರು. ಈ ಬಗ್ಗೆ ಹಲವರು ಸುಪ್ರೀಂ ಕೋರ್ಟ್ ಗಮನವನ್ನೂ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳ ಮೇರೆಗೆ ಸರ್ವೇ ನಡೆಯಲಿದೆ.

ಇದಕ್ಕಾಗಿ ಸರ್ವೇ ಆಫ್​ ಇಂಡಿಯಾದಿಂದ ಅಧಿಕಾರಿಗಳ ತಂಡ ಬರಲಿದ್ದು, ಅವರೊಂದಿಗೆ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಕಂದಾಯ ಇಲಾಖೆಯ ಅಧಿಕಾರಿಗಳು ಜತೆ ಆಗಲಿದ್ದಾರೆ. ಬಳ್ಳಾರಿ ರಕ್ಷಿತಾರಣ್ಯ ಪ್ರದೇಶದಲ್ಲಿನ ತುಮಟಿ, ವಿಠಲಾಪುರ, ಮಲ್ಲಪ್ಪನಗುಂಡಿ ಹಾಗೂ ಸಿದ್ಧಾಪುರ ಗ್ರಾಮಗಳಲ್ಲಿ ಗಡಿಗುರುತು ನಾಶವಾಗಿದ್ದು, ಅವುಗಳನ್ನು ಮತ್ತೆ ಗುರುತು ಮಾಡಲು ಸರ್ವೇ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net