ಸಾಧನೆಗೆ ಸತತ ಪ್ರಯತ್ನ ಮಾಡುವುದು ಅಗತ್ಯ

29Harugeri1
Published on

ಹಾರೂಗೇರಿ: ಅನ್ನಕ್ಕಾಗಿ ಬದುಕದೆ ಆನಂದಕ್ಕಾಗಿ ಬದುಕುವುದು ನಿಜವಾದ ಜೀವನ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಮುನ್ನುಗ್ಗಬೇಕು ಎಂದು ಲೆಕ್ಕ ಪರಿಶೋಧಕ ವೃತ್ತ ನಿರೀಕ್ಷಕ ಶಂಕರಾನಂದ ಬನಶಂಕರಿ ಹೇಳಿದರು.

ಪಟ್ಟಣದ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಏಕಲವ್ಯ ವಿಜ್ಞಾನ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಕಮರಿಮಠದ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಮಾತನಾಡಿ, ಜಾಣರನ್ನು ಜಾಣರಾಗಿ ಮಾಡುವುದಲ್ಲ, ದಡ್ಡರನ್ನು ಜಾಣರಾಗಿ ಮಾಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದರು. ಸಂಸ್ಥೆ ಅಧ್ಯಕ್ಷ ಆರ್.ಎಂ.ಗಸ್ತಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಆದರ್ಶ ಮೌಲ್ಯ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿ ಗಳಿಗೆ ಗಣ್ಯರು ಏಕಲವ್ಯ ಏಕ್ಸಪೋ ಪ್ರಶಸ್ತಿ ನೀಡಿ, ಪ್ರೋತ್ಸಾಹಿಸಿದರು. ಪ್ರಾಚಾರ್ಯ ಎಲ್.ಬಿ.ಬನಶಂಕರಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಸುಭಾಷ ವಲ್ಯಾಪುರೆ, ಸಂಸ್ಥೆ ಆಡಳಿತಾಧಿಕಾರಿ ಪ್ರಮೋದ ಗಸ್ತಿ, ಸಲಹಾ ಸಮಿತಿ ಅಧ್ಯಕ್ಷ ಸಿದ್ಧಪ್ಪ ಬನಾಜ, ಬಾಹುಬಲಿ ಪರಮಗೌಡರ, ಶಿಕ್ಷಕ ಶಂಕರ ಜಾಲಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net