ತಿ.ನರಸೀಪುರ ದಲ್ಲಿ ಉದ್ಯೋಗ ಮೇಳ - 55 ಜನರಿಗೆ ಪ್ಲೇಸ್‌ಮೆಂಟ್

9 TNP Udyoga MELA
Published on

ತಿ.ನರಸೀಪುರ : ಯುವಜನರು ತಮ್ಮಲ್ಲಿರುವ ಕೌಶಲ ಮತ್ತು ಪದವಿಗಳಿಗೆ ಅನುಗುಣವಾಗಿ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಬೇಕು. ಇದಕ್ಕೆ ಉದ್ಯೋಗ ಮೇಳ ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ವಿ ಉದಯ ಕುಮಾರ್ ಹೇಳಿದರು. ಪಟ್ಟಣದ ಹಳೇ ಸಂತೇಮಾಳದಲ್ಲಿರುವ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಅನೇಕ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಇವೆ. ವಿಶೇಷ ತರಬೇತಿಗಳನ್ನು ಪಡೆದವರು ಬದುಕು ರೂಪಿಸಿಕೊಳ್ಳಬಹುದು ಎಂದರು. ಈಗಾಗಲೇ ನಮ್ಮ ಕಾಲೇಜಿನಗೆ ಅನೇಕ ಕಂಪನಿಗಳು ಕ್ಯಾಂಪಸ್ ಇಂಟರ್‌ವ್ಯೆಗೆ ಆಗಮಿಸಿವೆ. ಇಂತಹ ಅವಕಾಶವನ್ನು ಪಡೆದುಕೊಳ್ಳುವುದರ ಮೂಲಕ ಯುವಜನರು ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದರು. ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿಗಳಾದ ಬಿ.ಎಂ ರಾಮಮೂರ್ತಿ,ಪಿ.ಆರ್ .ಸವಿತಾ, ಐಕ್ಯೂಸಿ ಡಾ.ಅಮಿತ್, ಗ್ರಂಥಪಾಲಕ ಡಾ.ಪುಟ್ಟಸ್ವಾಮಿ, ಉಪನ್ಯಾಸಕರಾದ ಡಾ.ಕೆಂಪರಾಜು, ಮಹೇಶ್, ವಿವಿಧ ಕಂಪನಿಗಳ ಎಚ್‌ಆರ್ ಗಳಾದ ದಿವ್ಯಾ ಆಚಾರ್ಯ, ಕವಿತಾ ಇತರರು ಹಾಜರಿದ್ದರು.

55 ಜನರಿಗೆ ಪ್ಲೇಸ್‌ಮೆಂಟ್:

ಮೇಳದಲ್ಲಿ ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಮುತ್ತೂಟ್ ಫೈನಾನ್ಸ್, ಕ್ಯಾಡ್ಮಾಸ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕಂಪನಿಗಳ ಅಧಿಕಾರಿಗಳು ಭಾಗವಹಿಸಿದ್ದರು. ತಿ. ನರಸೀಪುರ, ಕೊಳ್ಳೇಗಾಲ, ಸಂತೆಮಾರಳ್ಳಿ, ಚಾಮರಾಜನಗರ, ಮೈಸೂರು, ಯಳದೂರು, ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಯ 150 ಕ್ಕೂ ಹೆಚ್ಚು ಪದವೀಧರರು ಭಾಗವಹಿಸಿದ್ದರು. ವಿದ್ಯಾರ್ಹತೆ ಮತ್ತು ಸಂದರ್ಶನದ ಆಧಾರದ ಮೇರೆಗೆ 55 ಜನರಿಗೆ ಪ್ಲೇಸ್‌ಮೆಂಟ್ ( ಕೆಲಸಕ್ಕೆ ಅನುಮತಿ ಪತ್ರ) ದೊರಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net