ಡೇರಿಗೆ ಗುಣಮಟ್ಟದ ಹಾಲು ನೀಡಿ

Nandini Milk
Published on

ತಿ.ನರಸೀಪುರ : ರೈತರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕೊಳತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರ್ ಹೇಳಿದರು.

ಕೊಳತ್ತೂರು ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೈನುಗಾರರು ಶುದ್ಧ ಹಾಲನ್ನು ನಿತ್ಯವೂ ನೀಡಿದರೆ ಸಂಘಕ್ಕೆ ಮಾತ್ರವಲ್ಲ, ಸದಸ್ಯರಿಗೂ ಲಾಭವಿದೆ. ಸರ್ಕಾರದ ಪ್ರೋತ್ಸಾಹ ಧನವೂ ದೊರಕುತ್ತದೆ ಎಂದರು. ರೈತರು ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಯಲ್ಲಿ ಒಟ್ಟಾಗಿ ತೊಡಗಿಸಿಕೊಂಡರೆ ಯಾವುದೇ ನಷ್ಟ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿ ಎಂದು ಸಲಹೆ ನೀಡಿದರು.

ನಂದಿನಿ ನಮ್ಮ ಹೆಮ್ಮೆ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ರಾಜ್ಯ, ಹೊರ ರಾಜ್ಯಗಳಿಗೆ ಮಾತ್ರವಲ್ಲದೆ ವಿದೇಶದ ಮಾರುಕಟ್ಟೆಯನ್ನೂ ಹೊಂದಿದೆ. ಇದು ನಮ್ಮೆಲ್ಲರಿಗೆ ಹೆಮ್ಮೆ. ನಂದಿನಿ ಹಾಲಿನ ಉತ್ಕೃಷ್ಟತೆಗೆ ಸಾಕ್ಷಿ ಎಂದರು.

ಆರೋಗ್ಯ ಪಾಲನೆಗೂ ಮಹತ್ವ ಕೊಡಿ: ಆರೋಗ್ಯವಂತ ಹಸುವಿನ ಶುದ್ಧ ಹಾಲನ್ನೇ ಸಂಘವು ತೆಗೆದುಕೊಳ್ಳುತ್ತದೆ. ಕೆಚ್ಚಲು ಬಾವು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಹಸುವಿನ ಹಾಲನ್ನು ಸಂಘಕ್ಕೆ ಸರಬರಾಜು ಮಾಡಬಾರದು. ಜಾನುವಾರುಗಳ ಆರೋಗ್ಯ ಪಾಲನೆಗೂ ಮಹತ್ವ ಕೊಡಿ ಎಂದು ಕುಮಾರ್ ಕೃಷಿಕರಿಗೆ ಮನವಿ ಮಾಡಿದರು.

ಸನ್ಮಾನ: ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಜಯಮ್ಮ, ಕೆ.ಶಂಕರ , ಮಹದೇವ ಅವರಿಗೆ ವಿಶೇಷ ಬಹುಮಾನ ನೀಡಿ ಅಭಿನಂದಿಸಲಾಯಿತು.ಸಂಘದ ಉಪಾಧ್ಯಕ್ಷ ಕಾಳಯ್ಯ,ನಿರ್ದೇಶಕರಾದ ಕೆ.ಶಂಕರ,ಕೃಷ್ಣ, ಮಹದೇವ, ತಿಮ್ಮರಾಯಗೌಡ, ನಿಂಗರಾಜು, ಟಿ.ಲೋಕೇಶ್, ಮಹದೇವಶೆಟ್ಟಿ, ರತ್ನಮ್ಮ, ಪದ್ಮಾ, ಸೋಮಣ್ಣ, ರತ್ನಾ, ಇಒ ಅನಿತಾ, ಮುಖ್ಯ ಕಾರ್ಯನಿರ್ವಾಹಕ ಸಿದ್ದರಾಜು, ಹಾಲು ಪರೀಕ್ಷಕ ಧನರಾಜು,ಗುಮಾಸ್ತ ಕೆ.ಎನ್. ಗೋವಿಂದ,ಸಹಾಯಕ ಚಂದನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net