ದೇವಸ್ಥಾನಗಳ ಆದಾಯ ದುರ್ಬಳಕೆ; ನೀರಜ್‌ ಡೊಣೆರಿಯಾ ದೂರು

IMG-20250218-WA0004.jpg
Published on

ಬೆಳಗಾವಿ: ರಾಜ್ಯದಲ್ಲಿ ದೇವಸ್ಥಾನಗಳ ಆದಾಯ ದುರ್ಬಳಕೆ ಹಿನ್ನೆಲೆ ಕರ್ನಾಟಕದಲ್ಲಿರುವ ವಿವಿಧ ದೇವಸ್ಥಾನಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಿಂದ ಮುಕ್ತಗೊಳಿಸಬೇಕು’ ಎಂದು ಬಜರಂಗ ದಳದ ರಾಷ್ಟ್ರೀಯ ಘಟಕದ ಸಂಯೋಜಕ ನೀರಜ್‌ ಡೊಣೆರಿಯಾ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿರುವ ಹಲವು ಪ್ರಮುಖ ದೇವಸ್ಥಾನಗಳು ಸರ್ಕಾರದ ವ್ಯಾಪ್ತಿಯಲ್ಲಿವೆ. ಆದರೆ, ಭಕ್ತರಿಂದ ಅಲ್ಲಿಗೆ ಬರುವ ಆದಾಯ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಹಿಂದು ಸಮುದಾಯದ ಕಲ್ಯಾಣಕ್ಕಾಗಿ ಬಳಕೆಯಾಗುತ್ತಿಲ್ಲ. ಬದಲಿಗೆ, ಸರ್ಕಾರ ಆ ಹಣ ದುರ್ಬಳಕೆ ಮಾಡುತ್ತಿದೆ. ಹಾಗಾಗಿ ಎಲ್ಲ ದೇವಸ್ಥಾನಗಳಲ್ಲಿ ಪ್ರತ್ಯೇಕವಾದ ಟ್ರಸ್ಟ್‌ ರಚಿಸಿ, ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

‘ಹಿಂದುಗಳು, ದೇವಸ್ಥಾನಗಳು ಮತ್ತು ಮಠಗಳಿಗೆ ಸೇರಿದ ಆಸ್ತಿಗಳನ್ನು ವಕ್ಫ್‌ ಮಂಡಳಿ ತನ್ನ ಆಸ್ತಿ ಎಂದು ನೋಟಿಸ್‌ ಕೊಡುತ್ತಿರುವುದು ಮತ್ತು ವಶಕ್ಕೆ ಪಡೆದಿರುವುದು ಸರಿಯಲ್ಲ. ತಕ್ಷಣವೇ ಇದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಗೋಹತ್ಯೆ, ಲವ್‌ಜಿಹಾದ್‌, ಮತಾಂತರ ಪ್ರಕರಣಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮ ವಹಿಸುತ್ತಿಲ್ಲ. ಬದಲಿಗೆ ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದೆ. ಕೂಡಲೇ ಎಚ್ಚೆತ್ತುಕೊಂಡು ಇಂಥ ಚಟುವಟಿಕೆ ಕೈಗೊಳ್ಳುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ನಮ್ಮ ಮೇಲೆ ಆಗುತ್ತಿರುವ ಹಲ್ಲೆ, ದೌರ್ಜನ್ಯ ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net