ಗ್ರಾಹಕ ಸ್ನೇಹಿಯಾಗಿದೆ ಟಿಎಂಸಿಸಿ ; ಎಟಿಎಂ ಕೇಂದ್ರದ ಬಗ್ಗೆ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೆಚ್ಚುಗೆ

29Tmk_TMCC_Bank
Published on

ತುಮಕೂರು: ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ (ಟಿಎಂಸಿಸಿ) ಬ್ಯಾಂಕ್ ಹೊಸ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕ ಸ್ನೇಹಿ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ ಎಂದು ಸಿದ್ಧಗಂಗಾಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶ್ರೀಗಳು ಹೇಳಿದರು.

ನಗರದ ಗುಬ್ಬಿ ಗೇಟ್ ಬಳಿ ಸೋಮವಾರ ಟಿಎಂಸಿಸಿ ಏಕವ್ಯಕ್ತಿ ಗ್ರಾಹಕ ಸೇವಾ ಕೇಂದ್ರ ಹಾಗೂ ಎಟಿಎಂ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಹೊಸ ದಾಖಲೆ ಮಾಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಹೊಸ ತಂತ್ರಜ್ಞಾನ ಬಳಸಿಕೊಳ್ಳುವುದರ ಜತೆಗೆ ಪಾರದರ್ಶಕತೆ ಕಾಪಾಡಿಕೊಂಡು ಗ್ರಾಹಕರ ನಂಬಿಕೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಈ ಬ್ಯಾಂಕ್ ಇನ್ನಷ್ಟು ಹೆಮ್ಮೆಯ ಸಂಸ್ಥೆಯಾಗಿ ಮತ್ತಷ್ಟು ಬೃಹದಾಕಾರವಾಗಿ ಬೆಳೆಯಲಿ ಎಂದು ಆಶಿಸಿದರು.

ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ, ಗ್ರಾಹಕರಿಗೆ ಒಂದೇ ಕಡೆ ಎಲ್ಲ ರೀತಿಯ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಏಕ ವ್ಯಕ್ತಿ ಗ್ರಾಹಕ ಕೇಂದ್ರ ಸ್ಥಾಪಿಸಲಾಗಿದೆ. ಆರ್‌ಟಿಜಿಎಸ್, ನೆಫ್ಟ್, ಉಳಿತಾಯ ಖಾತೆ, ಕರಂಟ್ ಅಕೌಂಟ್ ಎಲ್ಲ ರೀತಿಯ ಸೌಲಭ್ಯಗಳು ಇಲ್ಲಿ ದೊರೆಯಲಿದೆ. ಏಕ ವ್ಯಕ್ತಿ ಗ್ರಾಹಕ ಸೇವಾ ಕೇಂದ್ರ ಸ್ಥಾಪನೆ ಸಹಕಾರಿ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿದೆ. ಇದರಲ್ಲಿ ಎಲ್ಲ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದಾಗಿದೆ ಎಂದು ತಿಳಿಸಿದರು. ಕಡಿಮೆ ಖರ್ಚಿನಲ್ಲಿ ಗ್ರಾಹಕರಿಗೆ ಸೌಲಭ್ಯ ಒದಗಿಸುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಹಾಗಾಗಿ, ಜನತೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸದ್ಯದಲ್ಲೇ ನಗರದ ಯಲ್ಲಾಪುರದಲ್ಲೂ ಇದೇ ರೀತಿಯ ಶಾಖೆಯನ್ನು ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ನಗರದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ.

ಹನುಮಂತಪುರ, ಜಯನಗರ, ಕ್ಯಾತಸಂದ್ರ, ಸದಾಶಿವನಗರ ಹಾಗೂ ತಾಲೂಕು ಕೇಂದ್ರಗಳಲ್ಲೂ ಈ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಸಂಸದ ಜಿ.ಎಸ್.ಬಸವರಾಜು, ಬ್ಯಾಂಕ್ ಉಪಾಧ್ಯಕ್ಷ ಶ್ರೀಕರ, ಟಿಎಂಸಿಸಿ ಸಿಇಒ ರಮೇಶ್ ಸೇರಿ ಬ್ಯಾಂಕ್ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net