

ತುಮಕೂರು : ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡಬೇಕೆಂಬ ಉದ್ದೇಶದಿಂದ ಸೇವೆ ಒದಗಿಸಿದರೆ ಹಣಕಾಸು ಸಂಸ್ಥೆಗಳು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ಟಿಎಂಸಿಸಿ ಬ್ಯಾಂಕ್ 15ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಾಂಶಕ್ಕೆ ಚಾಲನೆ ಹಾಗೂ ಬ್ಯಾಂಕ್‌ನ ವರ್ಷದ ಅತ್ಯುತ್ತಮ ಗ್ರಾಹಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಗ್ರಾಹಕರ ಸೇವೆಗೆ ಅತ್ಯಾಧುನಿಕ ಸೇವೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರಿ ಸಂಸ್ಥೆಗಳಿಗೆ ಟಿಎಂಸಿಸಿ ಮಾರ್ಗದರ್ಶನ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಹಕಾರಿ ಕಾಯ್ದೆಯಲ್ಲಿ ಮಾಡಲಾದ ಬದಲಾವಣೆಯಿಂದ ಸೌಹಾರ್ದ ಸಹಕಾರ ಸಂಘಗಳು ಜನರ ಬಳಿಗೆ ಹೋಗಿದ್ದು, ಸೌಹಾರ್ದ ಸಂಸ್ಥೆಗಳು ಸಾಕಷ್ಟು ಸಾಧನೆ ಮಾಡುತ್ತಿವೆ. ಸಹಕಾರಿ ಸಂಸ್ಥೆಗಳು ಜನರ ನೆರವಿಗೆ ಹಾಗೂ ಸಮಾಜದ ಎಲ್ಲ ಶ್ರೇಣಿಯ ಜನರಿಗೂ ಬ್ಯಾಂಕಿಂಗ್ ಸೇವೆ ದೊರೆಯುವಂತೆ ಮಾಡಲಿ ಎಂದು ಸಲಹೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸಹಕಾರಿ ಸಂಸ್ಥೆಗಳ ಉಳಿವು ತಂತ್ರಜ್ಞಾನ ಹಾಗೂ ಸೇವೆ ಅವಲಂಬಿಸಿದೆ ಎಂಬುದಕ್ಕೆ ಟಿಎಂಸಿಸಿ ಉದಾಹರಣೆಯಾಗಿದೆ. ಸಹಕಾರಿ ಸಂಸ್ಥೆಗಳು ತಂತ್ರಜ್ಞಾನ ಅಳವಡಿಸಿಕೊಳ್ಳಲು ಹಿಂದುಳಿದರೆ ಸಹಕಾರಿ ಸಂಸ್ಥೆಗಳು ನಶಿಸುವ ಅಪಾಯ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ತಂತ್ರಾಂಶದ ಮೂಲಕವೇ ಬ್ಯಾಂಕ್ ವಹಿವಾಟು ನಡೆಸಲು ಅವಕಾಶ ಕಲ್ಪಿಸಿರುವ ಟಿಎಂಸಿಸಿ ಉಳಿದ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಗ್ರಾಹಕರ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದ್ದು, ಸಹಕಾರಿ ಸಂಸ್ಥೆಗಳು ಇದನ್ನು ಬಳಸಿಕೊಂಡು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ಮುಂದಾಗಬೇಕು. ಹೊಸ ಹೊಸ ತಂತ್ರಜ್ಞಾನ ಹಾಗೂ ಗ್ರಾಹಕರಿಗೆ ಅವಶ್ಯಕವಿರುವ ಸೇವೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ, ಕರೊನಾ ಕಾರಣಕ್ಕೆ ಬ್ಯಾಂಕ್ ವಹಿವಾಟುಗಳು ಮೊದಲಿನಂತೆ ನಡೆಯಲು ಸಾಧ್ಯವಿಲ್ಲದೇ ಇರುವುದರಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಳವಡಿಸಲಾಗುತ್ತಿದೆ. ಡಿಜಿಟಲ್ ತಂತ್ರಾಂಶಕ್ಕಿಂತ ಉನ್ನತವಾಗಿರುವ ಈ ತಂತ್ರಾಂಶ ಅಳವಡಿಸಿಕೊಳ್ಳುತ್ತಿರುವ ಮೊದಲ ಬ್ಯಾಂಕ್ ನಮ್ಮದಾಗಿದೆ ಎಂದರು.
ಅಮೆರಿಕ ಮೂಲದ ಗ್ಲೋಬಲ್ ಇಂಟೆಲಿಜೆನ್ಸ್ ವರ್ಚುವಲ್ ಅಸಿಸ್ಟೆಂಟ್ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಆರಂಭಗೊಳ್ಳುತ್ತಿರುವ ಎಐ ತಂತ್ರಾಂಶದಿಂದ ಶಾಖಾರಹಿತವಾಗಿ ಗ್ರಾಹಕರಿಗೆ ನೇರವಾಗಿ ಸೇವೆ ಒದಗಿಸಲು ಅವಕಾಶವಿದೆ. ಇಂತಹ ತಂತ್ರಾಂಶ ಅಳವಡಿಸಿಕೊಂಡಿರುವ ಪ್ರಪಂಚದ ಮೊದಲ ಸಹಕಾರಿ ಸಂಸ್ಥೆ ಟಿಎಂಸಿಸಿ ಎಂದು ಹೇಳಿದರು.
ವರ್ಷದ ಮೂವತ್ತು ಅತ್ಯುತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ, ಟಿಎಂಸಿಸಿ ಉಪಾಧ್ಯಕ್ಷ ಟಿ.ಎ.ಶ್ರೀಕರ, ಟಿಎಂಸಿಸಿ ನಿರ್ದೇಶಕರು, ಸಿಇಒ ರಮೇಶ್ ಹಾಗೂ ಸಿಬ್ಬಂದಿ ಇದ್ದರು.
ಗ್ರಾಹಕರಿಗೆ ಸುಲಭವಾದ ಬ್ಯಾಂಕಿಂಗ್ ಸೇವೆ ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಪ್ರಾರಂಭಿಸಲಾಗುತ್ತಿದ್ದು, ಆರು ತಿಂಗಳಿಂದ ಇಂಟರ್‌ೇಸ್ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಜಯ ತಂತ್ರಾಂಶದಿಂದ ಗ್ರಾಹಕರು 24/7 ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಅವಶ್ಯಕ ಮಾಹಿತಿ ಒದಗಿಸಲಿದೆ. ಎನ್.ಎಸ್.ಜಯಕುಮಾರ್ ಟಿಎಂಸಿಸಿ ಅಧ್ಯಕ್ಷ