

ಚಿಕ್ಕಮಗಳೂರು: ನಗರಸಭೆ ಆಸ್ತಿ ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ನೌಕರನ ಮೇಲೆ ದೂರು ದಾಖಲಾಗಿದ್ದು ಆತನನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನಿರ್ದೇಶನ ನೀಡಿದ್ದಾರೆ. ಆಸ್ತಿ ತೆರಿಗೆ ವಂಚನೆ ಪ್ರಕರಣ ಕುರಿತಂತೆ ಶುಕ್ರವಾರ ಸಂಜೆ ನಗರಸಭೆಗೆ ಭೇಟಿ ನೀಡಿ ಕಡತ ಪರಿಶೀಲಿಸಿ ಪೌರಾಯುಕ್ತ ಬಿ.ಸಿ.ಬಸವರಾಜ್ ಅವರಿಗೆ ನಿರ್ದೇಶನ ನೀಡಿದ ಅವರು, ಕಳೆದ ಒಂದು ವರ್ಷದ ಆನ್‍ಲೈನ್ ಮಾಹಿತಿ ಕಲೆ ಹಾಕಿದರು. ಆನ್‍ಲೈನ್‍ನಲ್ಲಿ ಚಲನ್‍ಗಳು ತೆಗೆಯಬಹುದಾದ್ದರಿಂದ ದುರುಪಯೋಗ ಸಾಧ್ಯತೆ ಹೆಚ್ಚಿದ್ದು ಚಲನ್ ತೆಗೆಯುವ ತೆರಿಗೆದಾರರ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವ ಹಾಗೆ ಮಾಡಿದರೆ ದುರುಪಯೋಗ ತಡೆಗಟ್ಟಬಹುದು ಎಂದು ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸಲಹೆ ನೀಡಿದರು.
ಅಕ್ರಮ ಚಲನ್‍ನಲ್ಲಿ ಅಚ್ಚರಿ ಸಂಖ್ಯೆ:
ಸಾರ್ವಜನಿಕರು ತೆರಿಗೆ ಕಟ್ಟಿರುವ 25ಕ್ಕೂ ಹೆಚ್ಚು ಅಕ್ರಮ ಚಲನ್‍ಗಳ ಮಾಹಿತಿ ಲಭ್ಯವಾಗಿದ್ದು ಈ ಪೈಕಿ ಚಲನ್‍ವೊಂದರಲ್ಲಿ 9ರ ಜತೆ 9 ಸೊನ್ನೆಗಳನ್ನು ಹಾಕಿ ಮೊಬೈಲ್ ಸಂಖ್ಯೆ ನಮೂದಿಸಿರುವುದು ಪತ್ತೆಯಾಗಿದ್ದು ವಂಚನೆಯಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಿದೆ. ಪಂಪಾನಗರದ ಮಹಮದ್ ರಫೀಕ್ ಮನೆ ಮತ್ತು ನೀರಿನ ಕಂದಾಯ ಸೇರಿ 6174 ರೂ.ಗಳನ್ನು ಜ.29 ರಂದು ಬಿಲ್ ಕಲೆಕ್ಟರ್ ಖಾತೆಗೆ ಗೂಗಲ್ ಪೇ ಮೂಲಕ ಪಾವತಿಸಿರುವ ದಾಖಲೆಯನ್ನು ತೆರಿಗೆದಾರ ಪೌರಾಯುಕ್ತರಿಗೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು ವಂಚನೆ ಪ್ರಕರಣ ಸಾಬೀತಿಗೆ ಮತ್ತೊಂದು ಸಾಕ್ಷಿಯಾಗಿದೆ.
ವೆಬ್‍ಸೈಟ್‍ನಲ್ಲಿ ಚಲನ್ ಲಭ್ಯ:
ಸಾರ್ವಜನಿಕರು ತೆರಿಗೆ ಹಣ ಕಟ್ಟಬೇಕಾದರೆ ವೆಬ್‍ಸೈಟ್‍ನಲ್ಲಿ ಚಲನ್ ಸಿದ್ಧಪಡಿಸಿಕೊಳ್ಳಬಹುದು. ನಂತರ ಬ್ಯಾಂಕ್‍ನಲ್ಲಿ ಹಣ ಕಟ್ಟಿದರೆ ಸೀಲ್ ಹಾಕಿ ನೀಡುತ್ತಾರೆ. ಒಂದು ಪ್ರತಿ ನಗರಸಭೆಗೆ ಮತ್ತೊಂದು ಬ್ಯಾಂಕ್‍ನಲ್ಲಿರುವ ವ್ಯವಸ್ಥೆಯಿದೆ. ನಕಲಿ ಸೀಲ್ ಮತ್ತು ಸಹಿಯನ್ನು ಮಾಡಿ ವಂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ಚಲನ್ ಮತ್ತು ಸೀಲ್ ಇದ್ದ ದಿನಾಂಕದಲ್ಲಿ ವ್ಯತ್ಯಾಸವಿರುವುದು ಪೌರಾಯುಕ್ತರ ಗಮನಕ್ಕೆ ಬಂದಿದೆ. ಪ್ರತಿದಿನ ನಗರಸಭೆಗೆ ಬರುವ ಚಲನ್‍ಗಳನ್ನು ಬ್ಯಾಂಕ್ ಚಲನ್ ಜತೆ ತಾಳೆ ಹಾಕಿದಲ್ಲಿ ಎಷ್ಟು ಬಾಕಿಯಿದೆ. ಅವರಿಂದ ಹಣ ಬಂದಿದೆಯೇ ಇಲ್ಲವೋ ಎಂಬುದು ತಿಳಿಯುತ್ತದೆ. ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸರ್ಕಾರಿ ಹಣ ದುರುಪಯೋಗವಾದಾಗ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು. ಸರ್ಕಾರದ ಹಣ ಬ್ರೋಕರ್ ಅಥವಾ ಭ್ರಷ್ಟರ ಪಾಲಾಗಬಾರದು ಎಂಬ ಉದ್ದೇಶದಿಂದ ವಂಚನೆ ಪ್ರಕರಣದಲ್ಲಿ ಕೂಡಲೆ ಕ್ರಮ ಕೈಗೊಂಡಿದ್ದೇವೆ. 25 ರಿಂದ 30 ನಕಲಿ ಚಲನ್‍ಗಳು ಸಿಕ್ಕಿವೆ ಎಂದು ಪೌರಾಯುಕ್ತ ಬಿ.ಸಿ.ಬಸವರಾಜು ತಿಳಿಸಿದ್ದಾರೆ.
ಮತ್ತಿಬ್ಬರು ಬ್ರೋಕರ್ ಗಳು ವಶ:
ನಗರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತೆ ಇಬ್ಬರು ಬ್ರೋಕರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ದಿನೇಶ್ ಮತ್ತು ಪರಮೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಪ್ಪಳ್ಳಿ ಆಲಿ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೆ ವಶಕ್ಕೆ ಪಡೆದಿದ್ದ ಬಿಲ್ ಕಲೆಕ್ಟರ್ ಶ್ಯಾಮ್ ಮತ್ತು ಬ್ರೋಕರ್ ಕೇಶವ ವಿರುದ್ಧ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ವಶಕ್ಕೆ ಪಡೆದಿರುವ ಬ್ರೋಕರ್ ಗಳ ತನಿಖೆ ಸಂದರ್ಭ ಸಾರ್ವಜನಿಕರಿಗೆ ವಂಚಿಸಿ ಆಸ್ತಿ ತೆರಿಗೆ ವಸೂಲಿ ಮಾಡಿರುವ ಹಲವು ನಕಲಿ ರಸೀದಿಗಳು ಲಭ್ಯವಾಗಿದ್ದು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.