

ಮಂಡ್ಯ: ವಿದ್ಯುತ್‌ಶಾಕ್ ಹೊಡೆದು ಮೃತಪಟ್ಟ ಕೋತಿಯನ್ನು ಹಿಂದು ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ ಪಾಂಡವಪುರ ತಾಲೂಕಿನ ದೊಡ್ಡಭೋಗನಹಳ್ಳಿ ಗ್ರಾಮಸ್ಥರು, 11ನೇ ದಿನದ ತಿಥಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿದರು.
ಗ್ರಾಮದಲ್ಲಿಯೇ ವಾಸವಿದ್ದ ಕೋತಿ ಸೆ.25ರಂದು ಸಾವನ್ನಪ್ಪಿತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಅದರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಅದರಂತೆ ಮನುಷ್ಯನಿಗೆ ಮಾಡುವ ವಿಧಿ ವಿಧಾನದಂತೆ ಕೋತಿಗೂ ಕೂಡ ತಿಥಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗ್ರಾಮದ ಪುರುಷರು, ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿದರು.
ಮಾತ್ರವಲ್ಲದೆ ಕೋತಿ ಭಾವಚಿತ್ರವಿರುವ ದೊಡ್ಡ ಫ್ಲೆಕ್ಸ್ ಮಾಡಿಸಿ ಪೂಜೆ ಸಲ್ಲಿಸಲಾಯಿತು. ಸ್ಮಶಾನದಲ್ಲಿ ಬಗೆಬಗೆಯ ತಿಂಡಿ, ತಿನಿಸು, ಹಣ್ಣುಗಳನ್ನಿಟ್ಟು ಆತ್ಮಕ್ಕೆ ಶಾಂತಿ ಕೋರಲಾಯಿತು. ವಿಶೇಷವೆಂದರೆ ಕೋತಿ ಹೆಚ್ಚು ಇಷ್ಟಪಡುವ ಕಡಲೇಕಾಯಿಯನ್ನಿಟ್ಟು ಪೂಜಿಸಲಾಯಿತು. ಅಂತೆಯೇ ಕೋತಿಯನ್ನು ಹೂಳಲಾಗಿದ್ದ ಸ್ಥಳದಲ್ಲಿ ಹಾಲನ್ನು ಹಾಕಲಾಯಿತು.
ಮಂಗನಿಂದ ಮಾನವನಾಗಿ ಬದಲಾವಣೆಯಾಗಿದ್ದಾರೆ. ಅಂತೆಯೇ ಆಂಜನೇಯಸ್ವಾಮಿಯ ಸಂಕೇತವಾಗಿರುವ ಕೋತಿ ಅಪಾರ ಶಕ್ತಿಯನ್ನು ಹೊಂದಿದೆ. ಜತೆಗೆ ಹಿಂದು ಧರ್ಮದ ಸಂಕೇತವಾಗಿದೆ. ಆದ್ದರಿಂದ ಹಿಂದು ಸಂಪ್ರದಾಯದಂತೆ ಕೋತಿಯ ಅಂತ್ಯಸಂಸ್ಕಾರ ಹಾಗೂ ತಿಥಿ ಕಾರ್ಯ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.