ಉಡುಪಿ: ಹಿಂದು ಧಮೀರ್ಯರ ಅತ್ಯಂತ ಪ್ರಮುಖ ಶ್ರದ್ಧಾ ಕೇಂದ್ರವಾದ ತಿರುಪತಿಯ ಶ್ರೀವೇಂಕಟೇಶ್ವರ ದೇವರ ಪರಮ ಪಾವನ ನೈವೇದ್ಯ ಪ್ರಸಾದಕ್ಕೆ ಕಲಬೆರಕೆ ತುಪ್ಪ ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರ ಮಾಡಲಾಗಿದೆ. ಈ ಘಟನೆ ಬಹು ದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಿದ್ದು, ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ದೇವಸ್ಥಾನ ಮತ್ತು ಮಠ-ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಇಂತಹ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಲು ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ಧಾರ್ಮಿಕ ಕೇಂದ್ರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ಸಂರಕ್ಷಣೆಗಾಗಿ ರಾಷ್ಟ್ರ ಮಟ್ಟದಲ್ಲಿ ಸಂತರ, ಪೀಠಾಧಿಪತಿಗಳ ನೇತೃತ್ವದ ಮಾರ್ಗದರ್ಶಕ ಮಂಡಳಿ ರಚಿಸಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ತಿಳಿಸಿದ್ದಾರೆ.
ತಿರುಪತಿಯ ಶ್ರೀನಿವಾಸನ ಸನ್ನಿಧಿಯಲ್ಲಿ ನಡೆದಿರುವ ಈ ಧಾರ್ಮಿಕ ಅಪಚಾರ ಖಂಡನೀಯ. ಇನ್ನುಮುಂದೆ ಇಂತಹ ಅಪವಿತ್ರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಧರ್ಮ ಸಂಸತ್ ರಚಿಸಬೇಕು. ತನ್ಮೂಲಕ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ದೇವಸ್ಥಾನ ಮತ್ತು ಮಠ-ಮಂದಿರ ಮುಕ್ತಗೊಳಿಸಬೇಕು. | ವಿದ್ಯೇಶ ತೀರ್ಥ ಶ್ರೀಪಾದರು. ಭಂಡಾರಕೇರಿ ಮಠ, ಉಡುಪಿ