

ಕೆ.ಆರ್.ಚಂದ್ರಶೇಖರ್ ಲಕ್ಕೂರು
ಮಾಲೂರು ತಾಲೂಕಿನ ಲಕ್ಕೂರು ಹೋಬಳಿ ಚಿಕ್ಕತಿರುಪತಿ ಗ್ರಾಮವು ವಿಶಿಷ್ಟ ಇತಿಹಾಸ ಹೊಂದಿದ್ದು, ಧಾರ್ಮಿಕ ನೆಲೆಯಿಂದಾಗಿ ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದಿದೆ.
2ನೇ ಶತಮಾನದಲ್ಲಿ ಚೋಳರಿಂದ ಸ್ಥಾಪಿಸಲ್ಪಟ್ಟ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ರಾಜ್ಯವಷ್ಟೇ ಅಲ್ಲದೇ ಪಕ್ಕದ ಆಂಧ್ರ ಮತ್ತು ತಮಿಳುನಾಡಿನ ಲಾಂತರ ಭಕ್ತರನ್ನು ಹೊಂದಿದ್ದು, ಪುರಾತನವಾದ ದೈವಿನೆಲೆಯಾಗಿದೆ.
ಚಿಕ್ಕತಿರುಪತಿ ಗ್ರಾಪಂ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾಗಿದ್ದು, 13 ಗ್ರಾಮಗಳು ಗ್ರಾಪಂ ವ್ಯಾಪ್ತಿಯಲ್ಲಿವೆ. 29 ಸದಸ್ಯರು ಆಯ್ಕೆಯಾಗಿದ್ದು, ದಿನದಿಂದ ದಿನಕ್ಕೆ ಗ್ರಾಪಂ ವ್ಯಾಪ್ತಿ ಸೇರಿ ಪ್ರಸಿದ್ಧ ಕ್ಷೇತ್ರವೂ ಅಭಿವೃದ್ಧಿ ಹೊಂದುತ್ತಿದೆ.
ದೈವಿಕ ಹಿನ್ನೆಲೆ: ಲೀಲಾಮಯನಾದ ಭಗವಂತನು ಈ ಪುಣ್ಯ ಕ್ಷೇತ್ರದಲ್ಲಿ ವೆಂಕಟೇಶ್ವರನಾಗಿ ನೆಲೆಸಿರುವುದರ ಹಿಂದೆ ಕುತೂಹಲಕಾರಿ ಕಥೆ ಇದೆ. ದ್ವಾಪರಯುಗದಲ್ಲಿ ಇಂದ್ರನಿಗೆ ಸರಿ ಸಮನಾದ ಶ್ವೇತಕಿ ಎಂಬ ಹೆಸರಿನ ಮಹಾರಾಜನು ಮಹಾ ದೈವಭಕ್ತನಾಗಿ ಧಾರ್ಮಿಕ ಕಾರ್ಯ ಮಾಡುತ್ತಾ, ಒಮ್ಮೆ ಮಹಾಯಾಗ ಮಾಡಲು ನಿಶ್ಚಯಿಸುತ್ತಾನೆ. ಮಹಾತಪಸ್ವಿಯೂ, ರುದ್ರಾಂಶ ಸಂಭೂತರೂ ಆದ ದೂರ್ವಾಸ ಮುನಿಗಳ ಮಾರ್ಗದರ್ಶನದಲ್ಲಿ ಬೃಹತ್ ಯಜ್ಞ ನಡೆದು ಅಜ್ಯ ಧಾರೆ ಸವಿಯನ್ನು ಹೊಂದಿ ಮಿತಿ ಮಿರಿದ ಹವಿಸ್ಸನ್ನು (ಪಂಚಾಮೃತ) ಸ್ವೀಕಾರ ಮಾಡಿದ್ದರಿಂದ ಅಗ್ನಿ ದೇವನಿಗೆ ಅಜೀರ್ಣವುಂಟಾಗಿ ಹಸಿವು ಇಂಗಿ ಹೋಗುತ್ತದೆ. ಮೊದಲಿನಂತಾಗಲು ಬ್ರಹ್ಮದೇವನನ್ನು ಪ್ರಾರ್ಥಿಸಿ ಅನಾರೋಗ್ಯದ ಬಗ್ಗೆ ತಿಳಿಸುತ್ತಾನೆ, ಬ್ರಹ್ಮದೇವ ಪರಿಹಾರೋಪಾಯವಾಗಿ ಜಂತುಗಳ ಕೇಂದ್ರ ಬಿಂದುವಾದ ಖಾಂಡವ ವನವನ್ನು ಧ್ವಂಸ ಮಾಡಿ ಅಲ್ಲಿರುವ ಪ್ರಾಣಿಗಳ ಮೇದಸ್ಸನ್ನು ಸವಿದರೆ ದಿವ್ಯ ತೇಜಸ್ಸು ಬರುತ್ತದೆ ಎಂದು ತಿಳಿಸುತ್ತಾನೆ. ಆಗ, ಅಗ್ನಿ ದಹನಕ್ಕೆ ಲಕ್ಷಾಂತರ ಕಾಡು ಪ್ರಾಣಿಗಳು ಸುಟ್ಟು ಹೋಗುತ್ತವೆ. ವನದಲ್ಲಿ ತಕ್ಷ ಎನ್ನುವ ದೊಡ್ಡ ಸರ್ಪಕ್ಕೆ ಬೆಂಕಿಯ ಜ್ವಾಲೆ ತಾಗಿ ಮೈ ತುಂಬ ಸುಟ್ಟ ಗಾಯಗಳಾಗುತ್ತವೆ. ಅದರ ಶಾಪದಿಂದಾಗಿ ಅಗ್ನಿದೇವ ನಿತ್ಯ ಕರ್ಮಗಳಿಗೆ ಯಜ್ಞ ಯಾಗಾದಿಗಳಿಗೆ ಬಾರದೇ ದೂರವಾಗುತ್ತಾನೆ. ಶಾಪ ವಿಮೋಚನೆಗಾಗಿ ಒಂದು ಮಂಡಲ ಕಾಲ ವಿಷ್ಣುವನ್ನು ಕುರಿತು ಘೋರ ತಪಸ್ಸು ಆಚರಿಸುತ್ತಾನೆ. ಆಗ ವಿಷ್ಣುವು ಪ್ರಸನ್ನ ವೆಂಕಟೇಶ್ವರನ ರೂಪದಲ್ಲಿ ಪ್ರತ್ಯಕ್ಷನಾಗಿ ಅಭಯಹಸ್ತನಾಗಿ ಶ್ರೀದೇವಿ ಭೂದೇವಿ ಸಮೇತ ಪ್ರಸನ್ನ ವೆಂಕಟರಮಣಸ್ವಾಮಿ ಎನ್ನುವ ನಾಮಾಂಕಿತದಿಂದ ಮಂಗಲ ರೂಪಿಯಾಗಿ ಚಿಕ್ಕತಿರುಪತಿಯಲ್ಲಿ ನೆಲಸಿದ ಎನ್ನುವುದು ಐತಿಹ್ಯ.
ಜಿಲ್ಲೆಯಲ್ಲೆ ಅತಿ ದೊಡ್ಡ ಸಂತೆ
ಚಿಕ್ಕತಿರುಪತಿಯಲ್ಲಿ ಪ್ರತಿ ಶನಿವಾರದ ವಾರದ ಸಂತೆಯು ಜಿಲ್ಲೆಯಲ್ಲೇ ಅತಿದೊಡ್ಡ ಸಂತೆ ಎನ್ನಲಾಗಿದೆ. ವಾರದ ಸಂತೆಗೆ ಲಕ್ಕೂರು ಹೋಬಳಿ, ತಾಲೂಕಿನ ಹಲವು ಗ್ರಾಮಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ, ಆನೇಕಲ್, ಹೊಸಕೋಟೆ ಹಾಗೂ ನೆರೆಯ ತಮಿಳುನಾಡಿನ ಹಲವಾರು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತರಕಾರಿ, ದಿನಸಿ ಪದಾರ್ಥಗಳು ಹಾಗೂ ಕುರಿ, ಕೋಳಿ, ಮೇಕೆ, ಹಸು ಸೇರಿ ಹಲವಾರು ವಸ್ತುಗಳನ್ನು ತಂದು ವಹಿವಾಟು ನಡೆಸುತ್ತಾರೆ.
2.50 ಕೋಟಿ ರೂ.ವೆಚ್ಚದಲ್ಲಿ ರಥಬೀದಿ ಅಭಿವೃದ್ಧಿ
ಚಿಕ್ಕತಿರುಪತಿ ಗ್ರಾಮವು ವೆಂಕಟರಮಣಸ್ವಾಮಿ ದೇವಾಲಯದಿಂದಲೇ ಹೆಚ್ಚು ಪ್ರಚಲಿತದಲ್ಲಿದ್ದು, ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗಾಗಿ ದೇವಸ್ಥಾನದ ರಥಬೀದಿಗೆ ಕಾಂಕ್ರೀಟ್ ರಸ್ತೆಯನ್ನಾಗಿಸುವಲ್ಲಿ ಮುತುವರ್ಜಿ ವಹಿಸಿದ ಶಾಸಕ ಕೆ.ವೈ.ನಂಜೇಗೌಡ ಅವರು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿ 2.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಿದ್ದಾರೆ. ದೇವಾಲಯವನ್ನು ಹೊಸದಾಗಿ ನಿರ್ಮಿಸುವ ಕುರಿತು ಈಗಾಗಲೇ 18 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ದೇವಾಲಯದ ಮುಂಭಾಗ 108 ಅಡಿ ರಾಜಗೋಪುರ ಕಾಮಗಾರಿ ಪೂರ್ಣಗೊಂಡಿದೆ.
ಡಿಜಿಟಲ್ ಗ್ರಂಥಾಲಯ
ಗ್ರಾಪಂನ ಹಳೆಯ ಕಟ್ಟಡದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ಮಿಸಿರುವುದು ಹೆಮ್ಮೆಯ ಸಂಗತಿ.
"ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಗ್ರಾಪಂ ಸದಸ್ಯರನ್ನು ಹೊಂದಿರುವ ಪಂಚಾಯಿತಿ ಆಗಿದ್ದು, ಜತೆಗೆ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳ್ಳುವ ಮೂಲಕ ಚಿಕ್ಕತಿರುಪತಿ ಗ್ರಾಪಂ ಜಿಲ್ಲೆಗೆ ಮಾದರಿಯಾಗಿದೆ."
- ಹರೀಂದ್ರಗೋಪಾಲ್
ಗ್ರಾಪಂ ಪಿಡಿಒ ಚಿಕ್ಕತಿರುಪತಿ
"ಚಿಕ್ಕತಿರುಪತಿ ಗ್ರಾಪಂ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡಿನ ಗಡಿ ಭಾಗಗಳಿಗೆ ಹೊಂದಿಕೊಂಡಿದೆ. 14 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಾಗುವ ಎಲ್ಲ ಅವಕಾಶಗಳಿವೆ. ಭಕ್ತರ ಅನುಕೂಲಕ್ಕಾಗಿ ಮಾಲೂರು, ಸರ್ಜಾಪುರ ಹಾಗೂ ಓಫಾಮ್ರ್ ರಸ್ತೆಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಿದರೆ ಅನುಕೂಲವಾಗುತ್ತದೆ."
- ಟಿ.ಸಿ.ಮಂಜುನಾಥ್
ಮುಖಂಡರು ಚಿಕ್ಕತಿರುಪತಿ
"ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಹಾಗೂ ವಾರ್ಷಿಕ 2 ಕೋಟಿ ರೂ. ಆದಾಯವಿರುವ ದೇವಾಲಯದಲ್ಲಿ ವಿವಾಹಕ್ಕೆ ನೋಂದಾಯಿಸುವ ಮೂಲಕ ವಾರ್ಷಿಕ ಸುಮಾರು 800ಕ್ಕೂ ಹೆಚ್ಚು ವಿವಾಹಗಳು ನಡೆಯುವುದು ವಿಶೇಷ."
- ಟಿ.ಸೆಲ್ವಮಣಿ
ಕಾರ್ಯನಿರ್ವಾಹಣಾಧಿಕಾರಿ, ಚಿಕ್ಕತಿರುಪತಿ
"ಗ್ರಾಮದಲ್ಲಿ 3 ಬ್ಯಾಂಕ್, 3 ಎಟಿಎಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- 1, ಸರ್ಕಾರಿ ಪ್ರೌಢಶಾಲೆ -1, ಖಾಸಗಿ ಪ್ರೌಢಶಾಲೆ- 2 ಹಾಗೂ ಖಾಸಗಿ ಕಾಲೇಜು ಒಳಗೊಂಡು ಬೃಹತ್ ಪಂಚಾಯಿತಿ ಆಗಿ ರೂಪುಗೊಂಡಿದೆ. ಆದರೆ, ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲ, ಆರಕ್ಷಕ ಠಾಣೆ ಇಲ್ಲ. ಸರ್ಕಾರಿ ಬಸ್ ಸಂಚಾರವಿಲ್ಲದೆ ನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಆನೇಕಲ್ನಿಂದ ಮಾಲೂರಿಗೆ ಹೋಗುವ ಬಸ್ಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ."
- ಟಿ.ಆರ್.ವೆಂಕಟೇಶ್ಗೌಡ
ಮಾಜಿ ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ, ಚಿಕ್ಕತಿರುಪತಿ