ಮೇಲುಕೋಟೆಯಲ್ಲಿ ತಿರುನಕ್ಷತ್ರ ಮಹೋತ್ಸವ

6mlk1
ಮೇಲುಕೋಟೆಯಲ್ಲಿ ಮನವಾಳಮಾಮುನಿ ಜೀಯರ್ ಉತ್ಸವ ನೆರವೇರಿತು.
Published on

ಹತ್ತು ದಿನಗಳ ಕಾಲ ನಡೆದ ಉತ್ಸವ ಸಂಪನ್ನ

ಮೇಲುಕೋಟೆ: ಮನವಾಳಮಾಮುನಿಜೀಯರ್ ಅವರ ತಿರುನಕ್ಷತ್ರ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು. ಈ ಮೂಲಕ ಹತ್ತು ದಿನಗಳ ಕಾಲ ನಡೆದ ಧಾರ್ಮಿಕ ಕೈಂಕರ್ಯಗಳು ಚೆಲುವನಾರಾಯಣಸ್ವಾಮಿ ಅವರ ಉತ್ಸವದೊಂದಿಗೆ ಮುಕ್ತಾಯವಾಯಿತು.

ಆಚಾರ್ಯ ರಾಮಾನುಜರ ನಂತರ ಶ್ರೀ ವೈಷ್ಣವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಶ್ರೀ ವೈಷ್ಣವ ಪರಂಪರೆಯನ್ನು ಉಳಿಸಿದ ಮಹಾಸಂತ ಮನವಾಳಮಾಮುನಿ ಜೀಯರ್ ಮೇಲುಕೋಟೆಯಲ್ಲಿ ನೆಲೆಸಿ ಕಾಲಕ್ಷೇಪಗಳನ್ನು ಕೈಗೊಂಡು ಚೆಲುವನಾರಾಯಣಸ್ವಾಮಿಯ ಸೇವೆ ಮಾಡಿದ್ದರು. ಈ ಕಾರಣಕ್ಕಾಗಿ ಮೇಲುಕೋಟೆಯಲ್ಲಿ ಜೀಯರ್ ತಿರುನಕ್ಷತ್ರ ಮಹೋತ್ಸವವನ್ನು ನಡೆಸುತ್ತಾಬರಲಾಗಿದ್ದು, ಈ ವರ್ಷವೂ ವೈಭವದಿಂದ ನಡೆಯಿತು.

ಮನವಾಳಮಾಮುನಿ ಜೀಯರ್ ತಿರುನಕ್ಷತ್ರ ಮಹೋತ್ಸವದಂದು ಕಲ್ಯಾಣಿಯಿಂದ ಭವ್ಯ ಮೆರವಣಿಗೆಯಲ್ಲಿ ಪವಿತ್ರ ತೀರ್ಥತಂದು ದ್ವಾದಶಾರಾಧನೆಯೊಂದಿಗೆ ವೇದಮಂತ್ರ ಮತ್ತು ಮಂಗಳವಾದ್ಯದೊಂದಿಗೆ ಭವ್ಯವಾಗಿ ಮಹಾಭಿಷೇಕ ನೆರವೇರಿಸಲಾಯಿತು. ನಂತರ ಭಗವದ್ ರಾಮಾನುಜರ ಸನ್ನಿಧಿಯಿಂದ ಶಠಾರಿ ಮರ್ಯಾದೆಗಳನ್ನು ಭಕ್ತಿಪೂರ್ವಕವಾಗಿ ಜೀಯರ್‌ಗೆ ನೆರವೇರಿಸಲಾಯಿತು. ವಿದ್ವಾನ್ ಶ್ರೀ ರಂಗಂ ಶಲ್ವನಾರಾಯಣನ್, ಬಿ.ವಿ. ಆನಂದಾಳ್ವಾರ್ ಸಾರಥ್ಯದಲ್ಲಿ ಜೀಯರ್ ಸನ್ನಿಧಿಯ ಅರ್ಚಕ ಸ್ಥಾನೀಕಂ ಶ್ರೀರಾಮನ್ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಸಂಜೆ ರಾಮಾನುಜರು, ಶ್ರೀದೇವಿಭೂದೇವಿ ಸಮೇತನಾದ ಚೆಲುವನಾರಾಯಣಸ್ವಾಮಿಯೊಂದಿಗೆ ಮನವಾಳಮಾಮುನಿ ಜೀಯರ್‌ಗೆ ಭವ್ಯ ಉತ್ಸವ ನೆರವೇರಿತು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಶೀಲಾ ಸೇರಿದಂತೆ ಹಲವುಗಣ್ಯರು ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net