ಮಾರ್ಚ್​ನಲ್ಲಿ ‘ಅಭಿರಾಮಿ’ ತೆರೆಗೆ

7 smg sharan talad
Published on

ಶಿವಮೊಗ್ಗ: ಹೊಸ ತಂಡದ ಪ್ರಯತ್ನವೇ ‘ಅಭಿರಾಮಿ’ ಆಗಿದ್ದು 5 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಚಿತ್ರವು 2021ರ ಮಾರ್ಚ್​ನಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಶರಣ್ ತಾಳದ್ ತಿಳಿಸಿದರು.

ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಜವಾಬ್ದಾರಿಯನ್ನು ನಾನೇ ಹೊತ್ತಿರುವೆ. ನಿರ್ವಪಕರಾಗಿ ಕೃಷ್ಣಪ್ಪ ಸೊರಬ ಅವರಿಗೆ ಇದು ಹೊಸ ಅನುಭವ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಮಹಿಳೆಯ ಸುತ್ತ ತಿರುಗುವ ಕಥೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುವ ಸಮೂಹಕ್ಕೆ ಸಂಬಂಧಿಸಿದ ಕಥೆಯಾಗಿದ್ದರೂ ಕಮರ್ಷಿಯಲ್ ಅಂಶಗಳೊಂದಿಗೆ ಸಾಗುವ ಹೊಸ ಬಗೆಯ ಚಿತ್ರ ಇದಾಗಿದೆ. ಗಂಭೀರ ವಿಷಯದೊಂದಿಗೆ ಕುತೂಹಲ ಕೆರಳಿಸುವ ಮೂಲಕ ಹೊಸತನ ಕೊಡುವ ನಿಟ್ಟಿನಲ್ಲಿ ಪ್ರಯೋಗಕ್ಕಿಳಿಯಲಾಗಿದೆ. ತಿಲಕ್ ನಾಯಕರಾಗಿ, ಕೇರಳದ ವೈಷ್ಣವಿ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಹಾಡುಗಳಿಗೆ ಕೇರಳ ಮತ್ತು ಕರ್ನಾಟಕದ ವಿವಿಧೆಡೆ ಚಿತ್ರೀಕರಣ ನಡೆಸುವುದು ಬಾಕಿ ಇದೆ ಎಂದರು.

ಚಿತ್ರಕ್ಕೆ ಎಂ.ಬಿ.ಹಳ್ಳಿಕಟ್ಟೆ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ತಾಂತ್ರಿಕತೆಯಲ್ಲಿ ಚಿತ್ರ ಶ್ರೀಮಂತವಾಗಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗದ ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ ಎಂದು ವಿವರಿಸಿದರು.

ಜಿ.ವಿ.ವೀರಣ್ಣ ಗೌಡ, ಮಂಜುನಾಥ, ಪ್ರದೀಪ್​ಕುಮಾರ್, ಎಂ.ರಘು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net