ತುಮಕೂರು: ಪತ್ನಿ ಕಿರುಕುಳ ಹಿನ್ನೆಲೆಯಲ್ಲಿ ವಿಡಿಯೋ ಮಾಡುತ್ತಲೇ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ರಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮರಳೂರು ದಿಣ್ಣೆ ನಿವಾಸಿ ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿದವ. 4 ವರ್ಷದ ಹಿಂದೆ ಸೈಯದ್ ನಿಕತ್ ಫಿದೋರ್ಸ್ ಎಂಬಾಕೆ ಜತೆ ವಿವಾಹವಾಗಿದ್ದು, 2 ವರ್ಷ ಒಟ್ಟಿಗಿದ್ದ ದಂಪತಿ ನಡುವೆ ಬಿರುಕು ಮೂಡಿ, ಫಿದೋರ್ಸ್ ತಾಯಿ ಮನೆ ಸೇರಿದ್ದರು.
ಫಿಧೋರ್ಸ್ ಎರಡನೇ ಮಗುವಿನ ಗರ್ಭಿಣಿಯಾದ ಸಂದರ್ಭದಲ್ಲಿ ಕುವೈತ್ಗೆ ತೆರಳಿದ್ದ ಸಲ್ಮಾನ್ ಪಾಷಾ ಅಲ್ಲಿ ಹೈಡ್ರಾಲಿಕ್ ಮೆಕಾನಿಕ್ ಆಗಿದ್ದ. ಈ ವೇಳೆ ತಾಯಿ ಮನೆಗೆ ತೆರಳಿದ್ದ ಫಿಧೋರ್ಸ್ ಪತಿ ಜತೆ ವೈಮನಸ್ಸು ಮೂಡಿದ್ದು, ದಿನ ಕಳೆದಂತೆ ಜಗಳ ಆರಂಭಿಸಿದ್ದಾರೆ. ಸಲ್ಮಾನ್ಗೆ ಹಣ ನೀಡುವಂತೆ ಪತ್ನಿ, ಆಕೆ ಕುಟುಂಬ ಹಾಗೂ ಸಂಬಂಧಿ ಸೈಯದ್ ಬುರ್ಹಾನ್ ಉದ್ದೀನ್ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಸಲ್ಮಾನ್ ಕುವೈತ್ನಿಂದ ಮರಳಿದ ಬಳಿಕ ಇಬ್ಬರು ಮಕ್ಕಳನ್ನು ತೋರಿಸದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಹಣ ಕೊಡದಿದ್ದರೆ ವಿಚ್ಛೇದನ ನೀಡುವುದಾಗಿ ಹೆದರಿಸಿದ್ದು, ಮಕ್ಕಳನ್ನು ಕೊಡದೇ ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಭಾನುವಾರ ವಿಷ ಕುಡಿಯುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಲ್ಮಾನ್ ಕುಟುಂಬಸ್ಥರು ಜಿಲ್ಲಾ ಪೊಲೀಸ್ ಕಚೇರಿಗೆ ಈ ಬಗ್ಗೆ ದೂರು ನೀಡಿದ್ದಾರೆ.