

ರಾಯಚೂರು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕಿಸ್ಥಾನ ಉಗ್ರರಿಗೆ ಪ್ರತ್ಯುತ್ತರ ನೀಡಲಾಗಿದ್ದರಿಂದ ಮೇ 17 ರಂದು ರಾಷ್ಟ್ರ ರಕ್ಷಣಾ ಸಮಿತಿ ಹಾಗೂ ಮಾಜಿ ಸೈನಿಕರಿಂದ ನಗರದಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಡಾ.ಶಿವಬಸ್ಸಪ್ಪ ಮಾಲೀಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.26ರಂದು ಇಡೀ ದೇಶದ ಜನ ಬೆಚ್ಚಿ ಬೀಳುವಂತೆ ಪಾಕಿಸ್ಥಾನದ ಉಗ್ರರು ಭಾರತೀಯ ಪ್ರವಾಸಿಗರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಆ ದಿನವು ಇಡೀ ದೇಶಕ್ಕೆ ಕರಾಳ ದಿನವಾಗಿದ್ದು, ನಂತರ ಉಗ್ರರ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ದೇಶದ ಸೈನ್ಯದಿಂದ ಐತಹಾಸಿಕ ಕಾರ್ಯಾಚರಣೆ ಆರಂಭವಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ಥಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು.
ದಾಳಿ ಮೂಲಕ ಪಾಕಿಸ್ಥಾನ ದೇಶದ ಉಗ್ರರ ವಿರುದ್ಧ ಸೇಡು ತೀರಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ರಾಯಚೂರು ನಗರದಲ್ಲಿ ಮೇ 17ರ ಬೆಳಗ್ಗೆ 9 ಗಂಟೆಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಸರ್ದರ ವಲ್ಲಭ ಬಾಯಿ ಪಟೇಲ್ ವೃತ್ತದವರೆಗೆ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾತ್ರೆಯಲ್ಲಿ ಮಾಜಿ ಸೈನಿಕರು,ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೆ.ಎಸ್.ರಾವ್, ರಮೇಶ ಕುಲಕರ್ಣಿ, ನಾಗೇಶ, ಡಾ.ಆನಂದ ಫಡ್ನವಿಸ್, ಕಿಶನ್ ಪ್ರಸಾದ್ ಇದ್ದರು.