

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಹಾಗೂ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರದ ಪ್ರತೀಕವಾಗಿ ಧಾರವಾಡ ನಾಗರಿಕರ ವೇದಿಕೆ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ನಗರದ ಕೆಸಿಸಿ ಬ್ಯಾಂಕ್ ವೃತ್ತದಿಂದ ಆರಂಭವಾದ ತಿರಂಗಾ ಯಾತ್ರೆ ಮೆರವಣಿಗೆ, ವಿವೇಕಾನಂದ ವೃತ್ತದ ಮೂಲಕ ಕಲಾಭವನವರೆಗೆ ಸಾಗಿತು. ಮಾಜಿ ಹಾಗೂ ಹಾಲಿ ಸೈನಿಕರು, ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡು ತಿರಂಗಾ ಯಾತ್ರೆಯನ್ನು ಯಶಸ್ವಿಗೊಳಿಸಿದರು. ಮಾಜಿ ಸೈನಿಕರನ್ನು ಧಾರವಾಡ ನಾಗರಿಕರ ವೇದಿಕೆಯಿಂದ ಸನ್ಮಾನಿಸಲಾಯಿತು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ವಿಜಯಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ಬಸವರಾಜ ಗರಗ, ಮಂಜು ಮಲ್ಲಿಗವಾಡ, ರಾಜೇಶ್ವರಿ ಸಾಲಗಟ್ಟಿ, ಪುಷ್ಪಾ ನವಲಗುಂದ, ಮಲ್ಲಿಕಾರ್ಜುನ ಹೊರಕೇರಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು.