ಗಮನ ಸೆಳೆದ ತಿರಂಗಾ ಯಾತ್ರಾ

New Tiranga new
Published on

ಹುಬ್ಬಳ್ಳಿ : ಕಾಶ್ಮೀರದ ಪಹಲ್ಗಾಮ್ಲ್ಲಿ ಹಿಂದುಗಳ ಹತೈಗೈದ ಪಾಕಿಸ್ತಾನಿ ಉಗ್ರಗಾಮಿಗಳ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಮೂಲಕ ಯಶಸ್ವಿ ಕಾರ್ಯುಚರಣೆ ನಡೆಸಿದ ಭಾರತೀಯ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಗರದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಬೃಹತ್ ತಿರಂಗಾ ಯಾತ್ರಾ ಆಯೋಜಿಸಲಾಗಿತ್ತು.

ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಿರಂಗಾ ಯಾತ್ರಾಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಮೂರುಸಾವಿರ ಮಠದಿಂದ ಆರಂಭಗೊಂಡ ತಿರಂಗಾ ಯಾತ್ರೆಯು ದಾಜೀಬಾನಪೇಟ, ದುರ್ಗದ ಬೈಲ್, ಕೊಪ್ಪಿಕರ ರಸ್ತೆ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನ ಹೂವು, ಗುಲಾಲು ಎರಚುವ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರನ್ನು ಪ್ರೋತ್ಸಾಹಿಸಿದರು.

ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಜಯ ಘೋಷ ಕೂಗುತ್ತಿದ್ದರು. ತೆರೆದ ವಾಹನದಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಮೆರವಣಿಗೆ ತರಲಾಯಿತು. ದೇಶಭಕ್ತಿ ಗೀತೆಗಳು ಉತ್ಸಾಹ ತುಂಬಿದವು. ಪೆಂಡಾರಗಲ್ಲಿಯಲ್ಲಿ ಮುಸ್ಲಿಂ ಮಹಿಳೆಯರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ದೇಶಭಕ್ತಿ ಮೆರೆದರು. ಮತ್ತೊಂದೆಡೆ ವಿದ್ಯಾರ್ಥಿಗಳು ಉದ್ದನೆಯ ಭಾರತ ಧ್ವಜವನ್ನು ಹಿಡಿದು ಸಂಚರಿಸಿದರು.

ಅಂಬೇಡ್ಕರ ವೃತ್ತದ ಬಳಿ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಲಾಯಿತು. ನಂತರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮತ್ತಿತರರು ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

50 ಮೀಟರ್ ಉದ್ದ ಹಾಗೂ 5 ಮೀಟರ್ ಅಗಲದ ತ್ರಿವಣ ಧ್ವಜ ತಿರಂಗಾ ಯಾತ್ರೆಯಲ್ಲಿ ಗಮನ ಸೆಳೆಯಿತು. ಜಗ್ಗಲಗಿ, ಡೊಳ್ಳು, ಜಾಂಝå್ಗಳ ಜತೆಗೆ ದೇಶಭಕ್ತಿ ಗೀತೆಗಳು ಹುಮ್ಮಸ್ಸು ಹೆಚ್ಚಿಸಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ, ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳನ್ನು, ತರಬೇತಿ ಶಿಬಿರಗಳನ್ನು ಭಾರತೀಯ ಸೇನಾಪಡೆ ನಾಶಗೊಳಿಸಿದೆ. ಪಾಕಿಸ್ತಾನದ ಉಗ್ರರ ಅಂತ್ಯಕ್ರಿಯೆಯಲ್ಲಿ ಅಲ್ಲಿನ ಸೇನಾಧಿಕಾರಿಗಳು, ರಾಜಕೀಯ ಮುಖಂಡರು ಪಾಲ್ಗೊಂಡಿರುವುದು ಬಹಿರಂಗಗೊಂಡಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಆಪರೇಷನ್ ಸಿಂಧೂರ ಮುಗಿದಿಲ್ಲ. ಪಾಕಿಸ್ತಾನ ಮತ್ತೆ ಕೆಣಕಿದರೆ ಆ ದೇಶ ನಿರ್ನಾಮಗೊಳ್ಳಲಿದೆ. ಇಂತಹ ದುಸ್ಸಾಹಸ ಮರುಕಳಿಸಿದರೆ ಪಿಒಕೆ ಭಾರತದ ವಶವಾಗುವುದು ಖಚಿತ ಎಂದು ಎಚ್ಚರಿಕೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಆಪರೇಷನ್ ಸಿಂಧೂರ ಮೂಲಕ 72 ತಾಸುಗಳಲ್ಲಿ ಪಾಕಿಸ್ತಾನಕ್ಕೆ ನಮ್ಮ ಸೈನ್ಯ ತಕ್ಕ ಉತ್ತರ ಕೊಟ್ಟಿದೆ. ಭಾರತೀಯ ಯೋಧರು ನಡೆಸಿದ ದಾಳಿಯಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಎರಡ್ಮೂರು ವರ್ಷಗಳಾದರೂ ಬೇಕು ಎಂದರು.

ಶಾಸಕ ಎಂ.ಆರ್. ಪಾಟೀಲ, ಮಹಾಪೌರ ರಾಮಪ್ಪ ಬಡಿಗೇರ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಸಂತೋಷ ಚವ್ಹಾಣ, ಮಾಜಿ ಶಾಸಕರಾದ ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮುಖಂಡರಾದ ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಗುರು ಪಾಟೀಲ, ಸುಭಾಸಸಿಂಗ್ ಜಮಾದಾರ, ರಾಜು ಕಾಳೆ, ಇಂತಿಯಾಜ ಮುಲ್ಲಾ, ಕಲಂದರ ಮುಲ್ಲಾ (ಹಟೇಲಸಾಬ) ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net