

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವದ ಅಂಗವಾಗಿ ಹಮ್ ಭಾರತಿ ಫೌಂಡೇಷನ್ ಹಾಗೂ ಚಿನ್ಮಯ ಕಾಲೇಜ್ ವತಿಯಿಂದ ಹುಬ್ಬಳ್ಳಿಯಲ್ಲಿ ಶನಿವಾರ 150 ಅಡಿ ಉದ್ದದ ರಾಷ್ಟ್ರಧ್ವಜದೊಂದಿಗೆ ನಡೆಸಲಾದ ತಿರಂಗಾ ಯಾತ್ರೆ ಗಮನ ಸೆಳೆಯಿತು. ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಬೃಹತ್ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಚಿನ್ಮಯ ವಿದ್ಯಾಲಯದಿಂದ ಭವಾನಿನಗರ, ದೇಶಪಾಂಡೆನಗರ ಮಾರ್ಗವಾಗಿ ಕಿತ್ತೂರ ಚನ್ನಮ್ಮ ವೃತ್ತದವರೆಗೆ ರ‍್ಯಾಲಿ ನಡೆಸಲಾಯಿತು. ಡೊಳ್ಳು, ಝಾಂಜ್ ತಂಡಗಳು ಪಾಲ್ಗೊಂಡಿದ್ದವು. ರಾಷ್ಟೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಈ ಬಾರಿಯೂ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡುವುದರೊಂದಿಗೆ ಸಂಭ್ರಮ-ಸಡಗರದೊಂದಿಗೆ ಸ್ವಾತಂತ್ರ್ಯೊತ್ಸವ ಆಚರಿಸಬೇಕು ಎಂದು ಕರೆ ನೀಡಿದರು.
ಪಾಲಿಕೆ ಸದಸ್ಯ ವೀರಣ್ಣ ಸವಡಿ, ಹಮ್ ಭಾರತಿ ಫೌಂಡೇಷನ್ ಅಧ್ಯಕ್ಷ ಅನ್ವರ್ ಮುಲ್ಲಾ, ದತ್ತಮೂರ್ತಿ ಕುಲಕರ್ಣಿ, ಚಿನ್ಮಯ ಸಮೂಹ ಸಂಸ್ಥೆ ಅಧ್ಯಕ್ಷ ಗಿರೀಶ ಉಪಾಧ್ಯಾಯ, ಆಡಳಿತಾಧಿಕಾರ ವಿಶ್ವನಾಥ ರಾನಡೆ, ಧರ್ಮದರ್ಶಿಗಳಾದ ಪಾಂಡುರಂಗ ನಾಯ್ಡು, ಆರ್. ಎನ್ ಮೂರ್ತಿ, ಪ್ರಾಚಾರ್ಯ ಬಿ.ಕೆ. ವಿನಾಯಕ, ಇತರರು ಇದ್ದರು.