ತಿರಂಗಾ ಕಿರುಚಿತ್ರ ಬಿಡುಗಡೆ ಆ. 3ರಂದು

tiranga
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಷ್ಟ್ರ ಧ್ವಜದೊಂದಿಗಿನ ಭಾವನಾತ್ಮಕ ಸಂಬಂಧ ಹಾಗೂ ಐತಿಹಾಸಿಕ ಮಹತ್ವಗಳನ್ನು ಪರಿಚಯಿಸುವ ತಿರಂಗಾ-ಅನಿಮೇಟೆಡ್ ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮ ಆ. 3ರಂದು ಸಂಜೆ 5.30ಕ್ಕೆ ನಗರದ ನವೀನ ಹೋಟೆಲ್​ನಲ್ಲಿ ಆಯೋಜಿಸಲಾಗಿದೆ ಎಂದು ಆಧ್ಯಾ ಅನಿಮ್ಯಾಟಿಕ್ಸ್ ಪ್ರೖೆವೇಟ್ ಲಿಮಿಟೆಡ್​ನ ಸ್ಥಾಪಕ ಹಾಗೂ ನಿರ್ದೇಶಕ ರತ್ನಕುಮಾರ ಜಿ.ಕೆ. ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕರು ನಮ್ಮ ಧ್ವಜ ಕಥೆಯನ್ನು ಅರಿತಿಲ್ಲ. ಸ್ವಾತಂತ್ರ್ಯ ಹೋರಾಟದ ಆರಂಭದ ದಿನಗಳಿಂದ ಹಿಡಿದು, ಸ್ವಾತಂತ್ರ್ಯ ಹೋರಾಟಗಾರ ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ ಹಾಗೂ ಸ್ವಾತಂತ್ರ್ಯ ನಂತರ ಅಂಗೀಕರಿಸಲಾದ ತ್ರಿವರ್ಣ ಧ್ವಜ ವಿವರಣೆಯನ್ನು ಅನಿಮೇಟೆಡ್ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಖಾದಿ ಬಟ್ಟೆ ಬಳಸಿ ರಾಷ್ಟ್ರಧ್ವಜವನ್ನು ತಯಾರಿಸುವ ದೇಶದ ಏಕೈಕ ಅಧಿಕೃತ ಸಂಸ್ಥೆಯಾದ ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಬಗ್ಗೆಯೂ 6 ನಿಮಿಷಗಳ ಕಿರುಚಿತ್ರದಲ್ಲಿ ಬಿಂಬಿಸಲಾಗಿದೆ ಎಂದರು.

ಈ ಕಿರು ಚಿತ್ರಕ್ಕೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಲ್ಲ. ಇನ್​ಹೌಸ್ ರಚನೆಯಾಗಿದೆ. 2ಡಿ ಮತ್ತು 3ಡಿ ಅನಿಮೇಷನ್, ಸೂಪರ್ ಇಂಪೋಸಿಷನ್ ತಂತ್ರಗಳನ್ನು ಬಳಸಿದ್ದೇವೆ. ಈ ಕಿರುಚಿತ್ರವನ್ನು ಹೊರ ತರಲು ಮೂರೂವರೆ ತಿಂಗಳು ಕೆಲಸ ಮಾಡಿದ್ದೇವೆ ಹಾಗೂ 55-60 ಲಕ್ಷ ರೂ. ಖರ್ಚು ಮಾಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಡುಗಡೆ ಮಾಡುವರು. ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್ ಸಂತೋಷ ಚವ್ಹಾಣ ಪಾಲ್ಗೊಳ್ಳುವರು. ಸರ್ವಧರ್ಮ ಗುರುಗಳನ್ನು ಆಹ್ವಾನಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net