ಯಶಸ್ವಿಯಾಗಲಿ ತಿರಂಗಾ ಅಭಿಯಾನ

10-gdg-5
Published on

ಗದಗ: ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ. ಸುಶೀಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದನ್ವಯ ಆ.13ರಿಂದ ಆ.15ರವರೆಗೆ ಸರ್ಕಾರಿ ಕಟ್ಟಡಗಳ ಮೇಲೆ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಸೂರ್ಯಾಸ್ತಕ್ಕೆ ಧ್ವಜ ಇಳಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅದರಂತೆ ಮನೆಗಳ ಮೇಲೆ ಆ.13ರ ಬೆಳಗ್ಗೆಯಿಂದ ಆ.15ರ ಸೂರ್ಯಾಸ್ತದವರೆಗೆ ನಿರಂತರವಾಗಿ ಧ್ವಜ ಹಾರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ವಿವಿಧ ಇಲಾಖೆಗಳು ತಮ್ಮ ಅಧೀನ ಕಚೇರಿಗಳಿಗೆ ಬೇಕಾಗುವಂತಹ ಧ್ವಜಗಳ ಕುರಿತು ಶೀಘ್ರವೇ ಮಾಹಿತಿ ಒದಗಿಸಿ ಧ್ವಜಗಳನ್ನು ಖರೀದಿಸಬೇಕು. ಜಿಲ್ಲೆಯಲ್ಲಿ ಅಂದಾಜು ಮೂರು ಲಕ್ಷ ಹದಿನೇಳು ಸಾವಿರ ಮನೆಗಳಿದ್ದು ಈ ಪೈಕಿ ಶೇ.75 ರಷ್ಟು ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಗುರಿ ಹೊಂದಲಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಪ್ರತಿ ಮನೆಗೂ ರಾಷ್ಟ್ರ ಧ್ವಜ ವಿತರಿಸಲು ಕ್ರಮ ಕೈಗೊಳ್ಳುವ ಮೂಲಕ ಧ್ವಜಾರೋಹಣ ಹಾಗೂ ಅವರೋಹಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮಾತನಾಡಿ, ಜಿಲ್ಲಾಡಳಿತ ಭವನ ಸೇರಿದಂತೆ ನಗರದ ಪ್ರಮುಖ ವೃತ್ತ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ತ್ರಿವರ್ಣ ಧ್ವಜದ ರೂಪದಲ್ಲಿ ದೀಪಾಲಂಕಾರ ಮಾಡಬೇಕು ಎಂದರು. ತಾಲೂಕಾಡಳಿತಗಳು ಹಾಗೂ ಸ್ಥಳೀಯ ಸಂಸ್ಥೆಗಳು ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿ, ಜಾಥಾಗಳನ್ನು ಹಮ್ಮಿಕೊಳ್ಳುವಂತೆ ಹೇಳಿದರು.
ಜಿ.ಪಂ. ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ., ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ, ನಿರ್ವಿುತಿ ಕೇಂದ್ರದ ವ್ಯವಸ್ಥಾಪಕ ಪಿ.ಡಿ. ಶಿರೋಳ, ಕಾರ್ವಿುಕ ಅಧಿಕಾರಿ ಸುಧಾ ಗರಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net