

ತಿಪಟೂರು: ಉತ್ತಮ ಭವಿಷ್ಯಕ್ಕೆ ಶಿಕ್ಷಣವೊಂದೇ ರಾಜಮಾರ್ಗ ವಾಗಿದ್ದು, ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸುಧಾರಣೆಯಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ್‌ನಾರಾಯಣ್ ಹೇಳಿದರು.
ರಂಗಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ತುಮಕೂರು ವಿಶ್ವವಿದ್ಯಾಲಯದ ತಿಪಟೂರು ಸ್ನಾತಕೋತ್ತರ ಕೇಂದ್ರಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಕಾಣದ ಶಿಕ್ಷಣ ಪ್ರಗತಿ ಮತ್ತು ಸಮೃದ್ಧಿ ರಾಜ್ಯದಲ್ಲಿ ಆಗುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದೆ. ಶಿಕ್ಷಣದ ಜತೆ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದ್ದು, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ತರಗತಿಗಳಲ್ಲಿ ನಡೆಯುವ ಶಿಕ್ಷಣದ ಮಾಹಿತಿಯನ್ನು ಏಕ ಕಾಲದಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ನೋಡಬಹುದಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ 2.5 ಸಾವಿರ ಶಾಲಾ ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ವಿತರಣೆ, ಸರ್ಟಿಫೈಡ್ ಯೂನಿವರ್ಸಿಟಿ ಮ್ಯಾನೇಜ್‌ಮೆಂಟ್ ಸಿಸ್ಟಂ ಮೂಲಕ ಯಾವುದೇ ವಿವಿಗಳಿಗೆ ಕೇವಲ ಆಧಾರ್ ಸಂಖ್ಯೆಯೊಂದಿಗೆ ನೊಂದಾಯಿಸಿಕೊಳ್ಳಬಹುದಾದ ವಿನೂತನ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.
ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ವಿವಿಯ 70 ಎಕರೆ ಜಾಗವನ್ನು ಅಭಿವೃದ್ಧಿಪಡಿಸಲಾಗುವುದು. 22 ವರ್ಷದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಸ ರೂಪ ತರಲಾಗುತ್ತಿದೆ ಎಂದು ಹೇಳಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, 1968ರಲ್ಲಿ ಇಂದಿರಾಗಾಂಧಿ, 1986ರಲ್ಲಿ ರಾಜೀವ್ ಗಾಂಧಿ, 2014ರಲ್ಲೂ ಹೊಸ ಶಿಕ್ಷಣ ನೀತಿಗೆ ಪ್ರಯತ್ನ ನಡೆದಿತ್ತು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಶಿಕ್ಷಣ ನೀಡುವ ಉದ್ದೇಶದಿಂದ 2015 ರಿಂದ 2020ರವರೆಗೂ ಗ್ರಾಪಂ ಮಟ್ಟದಲ್ಲಿ ಚರ್ಚಿಸಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಬದುಕಿಗೆ ಬೇಕಾಗುವ ಜ್ಞಾನ ನೀಡುವುದು ಶಿಕ್ಷಣದ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಬದುಕಿಗೆ ತಕ್ಕಂತೆ ಶಿಕ್ಷಣ ನೀತಿ ರೂಪಿಸಲಾಗಿದೆ. 2030ರ ಒಳಗೆ ಇದನ್ನು ಸಮಗ್ರವಾಗಿ ಜಾರಿಗೆ ತರುವ ಅಚಲ ವಿಶ್ವಾಸವಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಈ ಭಾಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿಶ್ವ ವಿದ್ಯಾಲಯದಿಂದ 8 ತಾಲೂಕುಗಳ ವಿದ್ಯಾರ್ಥಿಗಳು ಪದವಿ ನಂತರದ ಉನ್ನತ ವ್ಯಾಸಂಗಕ್ಕೆ ತುಮಕೂರಿಗೆ ಹೋಗುವುದು ತಪ್ಪಲಿದೆ. ಸಂಸ್ಕೃತಿ, ನಡೆ-ನುಡಿ, ಆಚಾರ-ವಿಚಾರ, ಸರಿಪಡಿಸಲು ಹೊಸ ಶಿಕ್ಷಣ ನೀತಿ ಪೂರಕವಾಗಲಿ. ನಮ್ಮ ಸಂಸ್ಕೃತಿ ನಮ್ಮಲ್ಲೇ ಉಳಿಯುವಂತಾಗಿ ಭಾರತೀಯ ಸಂಸ್ಕೃತಿ ಅಳವಡಿಕೆ ಶಿಕ್ಷಣ ಪದ್ಧತಿಯಲ್ಲಿರಲಿ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಮೌಲ್ಯ ಮಾಪನ ಕೇಂದ್ರಗಳಲ್ಲಿ ಪೊಲೀಸರ ನಿಯೋಜನೆ ಜತೆಗೆ ಸಿಸಿ ಕ್ಯಾಮರ ಅಳವಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ವಿದ್ಯೆ ಹೆಚ್ಚಿದಂತೆ ನೈತಿಕತೆ ಮಾಯವಾಗುತ್ತಿದೆ. ಶಿಕ್ಷಣದ ಜತೆಗೆ ರಾಷ್ಟ್ರ, ಸಂಸ್ಕೃತಿಯ ಬಗ್ಗೆ ಯೋಚಿಸುವ ಯುವಕರನ್ನು ಕೊಡುವುದು ನೂತನ ಶಿಕ್ಷಣ ನೀತಿಯ ಪ್ರಯತ್ನವಾಗಿದೆ.
ಬಿ.ಸಿ.ನಾಗೇಶ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ.
15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವ ತಿಪಟೂರು ಸ್ನಾತಕೋತ್ತರ ಕೇಂದ್ರ ಕಲ್ಪಸಿರಿ ಎಲ್ಲ ರೀತಿಯ ಮೂಲಸೌಕರ್ಯಗಳೊಂದಿಗೆ ಪೂರ್ಣಗೊಳ್ಳಲು ಅಂದಾಜು 100 ಕೋಟಿ ರೂಪಾಯಿಯ ಅವಶ್ಯವಿದೆ. ಸದ್ಯಕ್ಕೆ ಆಡಳಿತ ಭವನ ನಿರ್ಮಾಣಕ್ಕೆ ತುಮಕೂರು ವಿವಿ ಅನುದಾನದಿಂದ 3ಕೋಟಿ ರೂ. ಬಿಡುಗಡೆ ಮಾಡಿಸಲಾಗಿದ್ದು, ತಕ್ಷಣಕ್ಕೆ ಎಸ್‌ಸಿಪಿಟಿಎಸ್‌ಪಿ ಅನುದಾನದಡಿ 5 ಕೋಟಿ ರೂ. ಬಿಡುಗಡೆ ಮಾಡಲು ಸಚಿವರನ್ನು ಕೋರಲಾಗಿದೆ.
ರಾಜು ತುಮಕೂರು ವಿವಿ ಸಿಂಡಿಕೇಟ್ ಸದಸ್ಯ