

ತಿಪಟೂರು: ದುರಸ್ತಿಗಾಗಿ ಲಾಕ್ ಆಗಿದ್ದ ನಗರದ ಸಬ್ ಜೈಲಿನ ದುರಸ್ತಿ ಕಾರ್ಯ ಮುಗಿದು ವರ್ಷವಾದರೂ ಇನ್ನೂ ಬಳಕೆಗೆ ಮುಕ್ತವಾಗದ ಕಾರಣ ಕೈದಿಗಳ ನಿರ್ವಹಣೆ ಪೊಲೀಸ್ ಸಿಬ್ಬಂದಿಯನ್ನು ಹೈರಾಣಾಗಿಸಿದೆ.
ನಗರಠಾಣೆ ಪಕ್ಕದಲ್ಲಿರುವ ತಾಲೂಕು ಉಪವಿಭಾಗ ಮಟ್ಟದ ಬಂದೀಖಾನೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಬಂಧಿಯಾಗಿದ್ದ ಆರೋಪಿಗಳು 2018ರ ೆ.14ರಂದು ಮಾದಕ ದ್ರವ್ಯ ಸೇವನೆ ಮತ್ತು ಕುಡಿದು ಗಲಾಟೆ ಮಾಡಿಕೊಂಡಿದ್ದೂ ಅಲ್ಲದೇ, ಸೆಲ್‌ಬೀಗ ಮುರಿದು ಈಚೆ ಬಂದು, ಇತರ ಸೆಲ್‌ಗಳಲ್ಲಿದ್ದ ಆರೋಪಿಗಳು ಹೊರ ಬರುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಬಂದೀಖಾನೆಯಲ್ಲಿದ್ದ ಪೀಠೋಪಕರಣಗಳು, ದಾಖಲೆ ಪತ್ರಗಳಿಗೆ ಬೆಂಕಿ ಇಟ್ಟು 2 ಲಕ್ಷ ರೂಪಾಯಿಗೂ ಅಧಿಕ ಹಾನಿ ಮಾಡಿದ್ದರು.
ಸ್ಥಳಕ್ಕೆ ಭೇಟಿ ಕೊಟ್ಟಿದ್ದ ನ್ಯಾಯಾಧೀಶರು ಹಾಗೂ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಜೈಲಿನ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ದುರಸ್ತಿ ಕಾರ್ಯಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ತಕ್ಷಣ ಇಲ್ಲಿದ್ದ ಕೈದಿಗಳನ್ನು ತುಮಕೂರಿನ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಿ, 2018ರ ಫೆಬ್ರವರಿ ತಿಂಗಳಿಂದ ಜೈಲ್ ಬಂದ್ ಮಾಡಿಸಿದ್ದರು.ನಂತರ ಅಂದಾಜು 40 ಲಕ್ಷ ರೂಪಾಯಿ ವೆಚ್ಚದಲ್ಲಿ 20 ರಿಂದ 25 ಕೈದಿಗಳನ್ನಿಡುವ ಬಂದೀಖಾನೆ ದುರಸ್ತಿ ಮಾಡಲಾಗಿದೆ. ಇಲ್ಲಿಂದಲೇ ಕೈದಿಗಳ ವಿಚಾರಣೆಗೆ ಅನುಕೂಲವಾಗುವಂತೆ ವಿಡಿಯೋ ಕಾನ್ಫರೆನ್ಸ್ (ವಿ.ಸಿ.ಸೌಲಭ್ಯ) ಎಲ್ಲೆಡೆ ಸಿಸಿ ಕ್ಯಾಮರಾ ಮತ್ತು ಕೈದಿಗಳು ತಪ್ಪಿಸಿಕೊಳ್ಳದಂತೆ ಲೋ ರೈಸಿಂಗ್ ಫೆನ್ಸ್ ಅಳವಡಿಕೆ ಮತ್ತು ಅಪಾಯದ ಮುನ್ಸೂಚನೆ ನೀಡಲು ಅಲಾರಾಂ ಅಳವಡಿಸಲಾಗಿದೆ. ಇಷ್ಟೆಲ್ಲ ಭದ್ರತೆ ಮತ್ತು ಮುಂಜಾಗ್ರತಾ ಕ್ರಮಗಳು ಮುಗಿದು ವರ್ಷವಾದರೂ ಇನ್ನೂ ಇಲ್ಲಿನ ಸಬ್‌ಜೈಲ್ ಬಳಕೆಗೆ ಮುಕ್ತವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ಸಾರ್ವಜನಿಕರ ತೆರಿಗೆ ಹಣ ಪೋಲಾದರೆ, ಇನ್ನೊಂದೆಡೆ ಪೊಲೀಸರ ಕರ್ತವ್ಯಕ್ಕೆ ಅಡಚಣೆ ಆಗಿದೆ.
ಪೊಲೀಸರಿಗೆ ಸವಾಲಾದ ಕೈದಿಗಳು: ತಿಪಟೂರು ತಾಲೂಕಿನಲ್ಲಿರುವ ಕಿಬ್ಬನಹಳ್ಳಿ, ಹೊನ್ನವಳ್ಳಿ, ನೊಣವಿನಕೆರೆ, ತಿಪಟೂರು ನಗರ, ಮತ್ತು ಗ್ರಾಮಾಂತರ ಸೇರಿ ತಾಲೂಕಿನ 5 ಠಾಣೆಗಳು, ಮತ್ತು ಚಿಕ್ಕನಾಯಕನಹಳ್ಳಿ, ಹಂದನಕೆರೆ ಮತ್ತು ಹುಳಿಯಾರಿನ ಮೂರು ಠಾಣೆ ಹಾಗೂ ತುರುವೇಕೆರೆ ಮತ್ತು ದಂಡಿನಶಿವರದ 2 ಠಾಣೆ ಸೇರಿ ಒಟ್ಟು 10 ಠಾಣೆಗಳ ವ್ಯಾಪ್ತಿಯ ಆರೋಪಿಗಳನ್ನು ನ್ಯಾಯಾಲಯದ ಆದೇಶದಂತೆ ಸಬ್ ಜೈಲಿನಲ್ಲಿ ಇರಿಸಲಾಗುತ್ತಿತ್ತು. ಈಗ ಇವರೆಲ್ಲರನ್ನೂ ತುಮಕೂರು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವುದು, ಮತ್ತು ವಿಚಾರಣೆ ಸಂದರ್ಭ ವಾಪಸ್ ತಿಪಟೂರಿಗೆ ಕರೆದುಕೊಂಡು ಬರುವುದು, ಮತ್ತೆ ವಾಪಸ್ ಬಿಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಒಂದೆಡೆ ಸಾರಿಗೆ ವ್ಯವಸ್ಥೆ, ಕರೊನಾ ಭೀತಿ ಮತ್ತು ಸರಿರಾತ್ರಿಯಲ್ಲಿ ತುಮಕೂರಿನಿಂದ 8 ಕಿ.ಮೀ ದೂರವಿರುವ ಬಂದಿಖಾನೆಗೆ ತಲುಪುವ ಸಮಸ್ಯೆ ಪೊಲೀಸರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಅಪರಾಧ ಚಟುವಟಿಕೆಗಳು ಗಮನಕ್ಕೆ ಬಂದರೂ ಜೈಲು ಸಮಸ್ಯೆ ಕಾರಣ, ಪೊಲೀಸರು ತನಿಖೆಗೆ ನಿರ್ಲಕ್ಷ್ಯ ಮಾಡುವುದು ಅನಿವಾರ್ಯ ಎನ್ನಲಾಗಿದೆ.
ಜಿಲ್ಲಾ ಜೈಲು ಅಧೀಕ್ಷಕರ ನಿರ್ಲಕ್ಷ್ಯ: ನಗರ ಸಮೀಪದ ಲಿಂಗದಹಳ್ಳಿ ಬಳಿ ಸುಸಜ್ಜಿತ ಬಂದೀಖಾನೆ ನಿರ್ಮಾಣಕ್ಕೆ 4 ಎಕರೆಗೂ ಹೆಚ್ಚು ಭೂಮಿ ಮತ್ತು 3 ಕೋಟಿ ರೂ. ಬಿಡುಗಡೆಯಾಗಿತ್ತು. ಜಿಲ್ಲಾ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಲ್ಲಿಗೆ ಮಂಜೂರಾಗಿದ್ದ 3 ಕೋಟಿ ರೂಪಾಯಿ ಚಿಕ್ಕಬಳ್ಳಾಪುರದ ಜೈಲು ನಿರ್ಮಾಣಕ್ಕೆ ವರ್ಗವಾಗಿದೆ ಎನ್ನಲಾಗಿದ್ದು, ಪ್ರಸ್ತುತ ಲಿಂಗದಹಳ್ಳಿಯಲ್ಲಿ ಮಂಜೂರಾಗಿದ್ದ ಭೂಮಿಯೂ ಒತ್ತುವರಿ ಆಗುತ್ತಿದೆ ಎಂಬ ಆರೋಪವಿದೆ.
ತಿಪಟೂರಿನ ಸಬ್ ಜೈಲ್ ದುರಸ್ತಿ ಕಾಮಗಾರಿ ಬಹುತೇಕ ಮುಗಿದಿದೆ. ಈ ಸಂಬಂಧ ಡಿಐಜಿ ಅವರೊಂದಿಗೆ ಮಾತನಾಡಲಾಗಿದೆ. ಅತೀ ಶೀಘ್ರದಲ್ಲಿಯೇ ಸಬ್ ಜೈಲು ಕಾರ್ಯಾರಂಭವಾಗಲಿದೆ. ಕೆ.ವಂಶಿಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ