ತುರುವೇಕೆರೆ, ತಿಪಟೂರು ಗಡಿಯಲ್ಲಿ ಆತಂಕ

12TMK_Sira_PHOTO_ROAD
Published on

ತುಮಕೂರು: ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಒಂದೇ ಕುಟುಂಬದ ಐವರಿಗೆ ಕರೊನಾ ಪಾಸಿಟಿವ್ ಪತ್ತೆಯಾದ ಕೂಡಲೇ ತುರುವೇಕೆರೆ, ತಿಪಟೂರು ತಾಲೂಕುಗಳಲ್ಲಿ ಆತಂಕ ತಲೆದೋರಿದೆ.

ಚನ್ನರಾಯ ಪಟ್ಟಣ ತಾಲೂಕಿನ ಜತೆ ಗಡಿ ಹಂಚಿ ಕೊಂಡಿರುವ ತಿಪಟೂರು ಹಾಗೂ ತುರುವೇಕೆರೆ ತಾಲೂಕಿನ ಗಡಿಭಾಗದ ಜನರು ವ್ಯಾಪಾರ ವಹಿವಾಟು ಹಾಗೂ ಸಂಬಂಧಗಳನ್ನು ಹೊಂದಿದ್ದಾರೆ, ಇದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದು ಗಡಿಯಲ್ಲಿ ಬಿಗಿಗೊಳಿಸಲಾಗಿದೆ.

ಚನ್ನರಾಯಪಟ್ಟಣದ ನುಗ್ಗೆಹಳ್ಳಿ, ಹಿರಿಸಾವೆ, ದಿಡಗ ಹೋಬಳಿಗಳು ತಿಪಟೂರು ತಾಲೂಕಿನ ಕಸಬಾ, ನೊಣವಿನಕೆರೆ ಹೋಬಳಿ ಹಾಗೂ ತುರುವೇಕೆರೆ ತಾಲೂಕಿನ ದೆಬ್ಬೇಘಟ್ಟ ಹೋಬಳಿಗೆ ಭೌಗೋಳಿಕ ಸಂಪರ್ಕ ಹೊಂದಿವೆ. ಮುಂಬೈನಿಂದ ಮೇ 8ರಂದು ಚನ್ನರಾಯಪಟ್ಟಣಕ್ಕೆ ಬಂದ ಕುಟುಂಬವನ್ನು ಅಂದೇ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹಾಗಾಗಿ, ಅವರು ಹಾಸನ ಜಿಲ್ಲೆಯಲ್ಲಿ ಓಡಾಟ ಮಾಡಿರುವುದು ಕಡಿಮೆ, ಇದರಿಂದ ಜನ ನೆಮ್ಮದಿಯಿಂದ ಇರಬಹುದಾದರೂ ಎಚ್ಚರ ತಪ್ಪುವಂತಿಲ್ಲ. ಗಡಿಗ್ರಾಮಗಳನ್ನು ಮುಖ್ಯವಾಗಿಟ್ಟುಕೊಂಡು ಜಾಗೃತಿ ಮೂಡಿಸುವ ಕೆಲಸ ಆಯಾ ತಾಲೂಕು ಆಡಳಿತದಿಂದ ಮಾಡಲಾಗುತ್ತಿದೆ.

ಹೊರಭಾಗದಿಂದ ಗ್ರಾಮಗಳಿಗೆ ಬಂದಿರುವವರ ಬಗ್ಗೆ ಸಹಾಯವಾಣಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲು ಮನವಿ ಮಾಡಲಾಗಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಚೆಕ್‌ಪೋಸ್ಟ್ ಮೂಲವೇ ಎಲ್ಲ ವಾಹನಗಳು ಹಾದುಹೋಗಲು ಸೂಚಿಸಲಾಗಿದೆ, ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲರ ವಿಳಾಸ, ಮೊಬೈಲ್ ಸಂಖ್ಯೆ ಪಡೆದು ಬಿಡುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ ನಿಯಂತ್ರಣದಲ್ಲಿರುವ ಮಹಾಮಾರಿ ಎದುರಿಸುವ ಸಂಕಲ್ಪದಲ್ಲಿ ಜಿಲ್ಲಾಡಳಿತ ಜನರ ಸಹಕಾರ ಬಯಸಿದೆ, ಎಲ್ಲರೂ

ದೈಹಿಕ ಅಂತರ ಹಾಗೂ ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ.

926 ಜನರ ವರದಿ ನಿರೀಕ್ಷೆ: ಜಿಲ್ಲೆಯಲ್ಲಿ ಈ ವರೆಗೆ 5271 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಸೋಂಕಿತರ ಸಂಪರ್ಕದಲ್ಲಿದ್ದವರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರಿಕ್ಷೆಗೆ ಕಳುಹಿಸಲಾಗಿದ್ದು ಬರೋಬ್ಬರಿ 926 ಜನರ ವರದಿಗಾಗಿ ಕಾಯಲಾಗುತ್ತಿದೆ.

ಶಿರಾ ಪ್ರವೇಶ ನಿರ್ಬಂಧ: ಶಿರಾ ನಗರದೊಳಗೆ ಪ್ರವೇಶಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು ಪೆಟ್ರೋಲ್ ಬಂಕ್ ಬಳಿ ಇರುವ ಚೆಕ್‌ಪೋಸ್ಟ್ ಮೂಲಕ ಮಾತ್ರ ನಗರ ಪ್ರವೇಶಿಸಲು ಹಾಗೂ ಹೊರಬರಲು ಅವಕಾಶ ನೀಡಲಾಗಿದೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಶಿರಾ ನಗರಕ್ಕೆ ಹೊಸಬರು ಆಗಮಿಸದಂತೆ ತಡೆದು ಕರೊನಾ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದೆ.

ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ, ಚೆಕ್‌ಪೋಸ್ಟ್ ಮೂಲಕವೇ ಜನರು ಸಂಚರಿಸಬೇಕು, ಗಡಿಗ್ರಾಮಗಳಲ್ಲಿ ಟಾಸ್‌‌ಕೆೆರ್ಸ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಹೊರಗಿಂದ ಬಂದಿರುವವರ ಬಗ್ಗೆ ಸ್ಥಳೀಯರು ನಮ್ಮ ಸಹಾಯವಾಣಿಗೆ ತಿಳಿಸಬೇಕು. ಕೆ.ಆರ್.ನಂದಿನಿ ಉಪವಿಭಾಗಾಧಿಕಾರಿ, ತಿಪಟೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net