

ತಿಪಟೂರು : ಜಮೀನಿನಲ್ಲಿ ಹಾದುಹೋಗಿರುವ ರಾಜಕಾಲುವೆಯಲ್ಲಿ ಯುಜಿಡಿ ಛೇಂಬರ್ ನಿರ್ಮಿಸಿರುವ ನಗರಸಭೆ ಕಾರ್ಯವೈಖರಿ ಆನೆ ನಡೆದಿದ್ದೇ ಹಾದಿ ಎಂಬಂತಾಗಿದೆ.
ನಗರದ ಕೆಲವೆಡೆ ನನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಮುಂದುವರಿಸಿರುವ ನಗರಸಭೆ, ಗಾಂಧಿನಗರದ ಅಲ್-ಅಮೀನ್ ಶಾಲೆಯಿಂದ ವೈ.ಟಿ.ರಸ್ತೆಯ ಸೇತುವೆ ಬಳಿ ಯುಜಿಡಿ ಕಾಮಗಾರಿ ಕೈಗೊಂಡಿದೆ. ನಕ್ಷೆ ನೋಡದೆ ಯುಜಿಡಿ ಮಾರ್ಗ ನಿರ್ಮಿಸಲಾಗುತ್ತಿದೆ. ಇದೀಗ ಈ ಜಾಗ ರಾಜಕಾಲುವೆಗೆ ಸೇರಿದೆ ಎಂಬುದು ಸ್ಪಷ್ಟವಾದ ಬಳಿಕ ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಉದ್ದೇಶಿತ ಜಾಗದಲ್ಲಿದ್ದ 200ಕ್ಕೂ ಹೆಚ್ಚು ಅಡಕೆ, 100ಕ್ಕೂ ಹೆಚ್ಚು ತೆಂಗಿನ ಮರಗಳು, ಬಾಳೆ, ಮಾವು, ಕರಿಬೇವು, ಹಣ್ಣಿನ ಗಿಡಗಳನ್ನು ಧರೆಗುರುಳಿಸಲಾಗಿದೆ. ಇನ್ನೊಂದೆಡೆ ಜಮೀನಿನ ಮಧ್ಯೆ ರಾಜಕಾಲುವೆ ನಿರ್ಮಿಸುತ್ತಿರುವ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರೋಪಿಸಿರುವ ರೈತರು, ಮತ್ತೊಮ್ಮೆ ಸರ್ವೇ ನಡೆಸಿ, ನಮ್ಮ ಜಾಗ ಹದ್ದುಬಸ್ತು ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ರಾಜಕಾಲುವೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಖರಾಬು ಜಾಗವೆಂದು ತಪ್ಪು ಮಾಹಿತಿ: ಸರ್ವೇಯರ್ ತೋರಿಸಿದ ಜಾಗವೇ ಖರಾಬು ಜಾಗವೆಂದು ನಗರಸಭೆ ಅಧಿಕಾರಿಗಳು, ಸರ್ವೇಯರ್ ಅವರಿಂದ ನಕ್ಷೆಯನ್ನೂ ಪಡೆಯದೆ ಕಾಮಗಾರಿ ಕೈಗೊಂಡಿದ್ದಾರೆ. ತಾವು ಮಾಡಿದ್ದೇ ಸರಿ ಎಂಬಂತೆ ರಾಜಕಾಲುವೆ ಹಾದು ಹೋಗಿರುವ ಮಧ್ಯ ಭಾಗದಲ್ಲಿ ಯುಜಿಡಿ ಚೇಂಬರ್ ನಿರ್ಮಿಸಿದ್ದಾರೆ.
132 ವರ್ಷಗಳ ನಂತರ ಸರ್ವೇ ; ಪ್ರತೀ 35 ವರ್ಷಗಳಿಗೆ ಒಮ್ಮೆ ಸರ್ವೇ ಕೈಗೊಳ್ಳಬೇಕು ಎಂಬುದು ನಿಯಮ. ಆದರೆ, 132 ವರ್ಷಗಳ ನಂತರ ಸರ್ವೇ ಮಾಡಲಾಗಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮಳೆನೀರು ಹರಿಯುವ ದೊಂಬರ ಹಳ್ಳದ ಪಕ್ಕದ ಜಾಗವನ್ನು ಖರಾಬು ಜಾಗವೆಂದು ಗುರುತಿಸಿ, ಇಲ್ಲಿ ಯುಜಿಡಿ ಕಾಮಗಾರಿ ಹಾದು ಹೋಗಲಿದೆ ಎಂದು ಫರ್ಮಾನು ಹೊರಡಿಸಿದ್ದರು. ಪರಿಣಾಮ ಖರಾಬು ಜಾಗದಲ್ಲಿದ್ದ ಮರ, ಗಿಡಗಳು ತೆರವುಗೊಂಡು ಕಾಮಗಾರಿಯ ಹಾದಿ ಸುಗಮಗೊಂಡಿತ್ತು. ಇದೀಗ ನಿರ್ಧಾರ ಬದಲಿಸಿರುವ ಸರ್ವೇಯರ್, ನಕ್ಷೆ ಪ್ರಕಾರ ಹಿಡುವಳಿ ಜಮೀನಿನ ಮಧ್ಯೆ ರಾಜಕಾಲುವೆ ಹಾದುಹೋಗಲಿದೆ. ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಹೇಳುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.
ಜಮೀನಿನ ಮಧ್ಯ ಭಾಗದಲ್ಲಿ ರಾಜಕಾಲುವೆ ಹಾದುಹೋದರೆ ಇನ್ನೊಂದು ಬದಿಯ ನಮ್ಮ ಜಮೀನಿಗೆ ಹೋಗಿ ಬರಲು ಕಷ್ಟವಾಗುತ್ತದೆ. ಸಂಪರ್ಕ ಸೇತುವೆ ನಿರ್ಮಿಸಿಕೊಡಿ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಜತೆಗೆ ತಕ್ಷಣವೇ ಮತ್ತೊಮ್ಮೆ ಜಂಟಿ ಸರ್ವೇ ಮಾಡಿ, ರಾಜಕಾಲುವೆ, ಖರಾಬು ಜಾಗ, ಮತ್ತು ನಗರಸಭೆ ಕೈಗೊಂಡಿರುವ ಯುಜಿಡಿ ಕಾಮಗಾರಿಯ ನಿರ್ದಿಷ್ಟ ಪ್ರದೇಶ ಗುರುತಿಸಿ, ಹದ್ದುಬಸ್ತು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಕ್ಷೆ ಪ್ರಕಾರ ಕಾಮಗಾರಿ ಕೈಗೊಳ್ಳದ ಪರಿಣಾಮ ನಾಶವಾಗಿರುವ ಮರ, ಗಿಡಗಳಿಗೆ ನಷ್ಟ ಭರಿಸಿ ಕೊಡುವವರು ಯಾರು ಎಂಬುದು ಪ್ರಶ್ನೆಯಾಗಿದೆ.
ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ತಹಸೀಲ್ದಾರ್ ಆರ್.ಜಿ. ಚಂದ್ರಶೇಖರ್. ನಗರಸಭೆ ಅಧ್ಯಕ್ಷ ಪಿ.ಜೆ. ರಾಮ ಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ನಗರಸಭೆ ಆಯುಕ್ತ ಉಮಾಕಾಂತ್, ಸಣ್ಣ ನೀರಾವರಿ ಇಲಾಖೆಯ ದೊಡ್ಡಯ್ಯ. ರೈತ ಸಂಘದ ಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ರಾಜಕಾಲುವೆ ಹಾದು ಹೋಗಿರುವ ಜಾಗದಲ್ಲಿ ಅಡಚಣೆ ಇರುವಂತಿಲ್ಲ. ನಗರಸಭೆ ಅಧಿಕಾರಿಗಳು ಮಾರ್ಗ ಬದಲಿಸಲು ಒಪ್ಪಿದ್ದಾರೆ. ಕಾಲುವೆಯ ಎರಡೂ ಬದಿಯಲ್ಲಿ 33 ಮೀಟರ್ ಬಫರ್ ಜೋನ್ ಇರುವುದು ಕಡ್ಡಾಯ. ದೊಡ್ಡಯ್ಯ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಾಜಕಾಲುವೆ ಹಾದು ಹೋಗಿರುವುದು ಎಲ್ಲರಿಗೂ ಗೊತ್ತು. ಪಕ್ಕದಲ್ಲಿರುವ ಯುಜಿಡಿ ಲೈನ್ ಬದಲಿಸಬೇಕು ಎಂಬುದು ರೈತರ ಒತ್ತಾಯ. ಜಂಟಿ ಸರ್ವೇ ಮಾಡಿದ ನಂತರ ಮಾಹಿತಿ ಸಿಗಲಿದೆ. ಹಿಂದೆ ಇದ್ದವರು ನಕ್ಷೆ ನೋಡಿದ್ದರೋ. ಇಲ್ಲವೋ, ಅವರನ್ನೇ ಕೇಳಬೇಕು. ಪಿ.ಜೆ.ರಾಮಮೋಹನ್, ನಗರಸಭೆ ಅಧ್ಯಕ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮುಂದಿನ ವಾರ ಭೂದಾಖಲೆಗಳ ಸಹಾಯಕ ನಿರ್ದೇಶಕರ ಸಮ್ಮುಖದಲ್ಲಿ ಜಂಟಿ ಸರ್ವೇ ಕೈಗೊಳ್ಳಲಾಗುವುದು. ಬಳಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಆರ್.ಜಿ.ಚಂದ್ರಶೇಖರ್, ತಹಸೀಲ್ದಾರ್ ಮೊದಲೇ ಸ್ಥಳ ನಿಗದಿಪಡಿಸಿದ್ದರೆ ನಮ್ಮ ತೆಂಗು, ಅಡಕೆ ಮರಗಳಾದರೂ ಉಳಿಯುತ್ತಿದ್ದವು. ಯಾರನ್ನೋ ಓಲೈಸಲು ಇವರು ಇಷ್ಟಬಂದಂತೆ ಮಾರ್ಗ ಬದಲಿಸುತ್ತಿದ್ದಾರೆ. ಈಗಾಗಲೇ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ದೊಂಬರ ಹಳ್ಳ ಇದ್ದು, ಇದರ ಪಕ್ಕದಲ್ಲಿ ಮತ್ತೆ ರಾಜಕಾಲುವೆ ನಿರ್ಮಿಸುತ್ತಿರುವುದು ಎಷ್ಟು ಔಚಿತ್ಯಪೂರ್ಣ? ಟಿ.ಎಲ್. ಆನಂದ್, ಪಾಳ್ಯದ ರೈತ