

ಹುಬ್ಬಳ್ಳಿ: ತರಗತಿಗಳಲ್ಲಿ ಶಿಕ್ಷಕರು ಹೇಳಿಕೊಡುವುದನ್ನು ಆಸಕ್ತಿಯಿಂದ ವಿದ್ಯಾರ್ಥಿಗಳು ಕಲಿಯಬೇಕು. ಪಾಲಕರು ಗುಣಾತ್ಮಕ ಸಮಯ ಹಾಗೂ ಕಲಿಯಲು ಪ್ರೇರಣೆ ನೀಡಬೇಕು ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಲಹೆ ನೀಡಿದರು.
ನಗರದ ಭೈರಿದೇವರಕೊಪ್ಪದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಜಾನಪದ ಪರಿಕಲ್ಪನೆಯೊಂದಿಗೆ ಭಾನುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಅಂಕ ಗಳಿಸುವುದರ ಜತೆಗೆ ಗುಣಾತ್ಮಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಶಾಲೆಯ ಗೌರವ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಮಕ್ಕಳು ಕಲಿಕೆಯ ಜತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ, ಪ್ರಾಚಾರ್ಯೆ ಮತ್ತು ಆಡಳಿತಾಧಿಕಾರಿ ಶರ್ಮಿಳಾ ಹೊಸೂರು ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಎಂ.ಡಿ. ವೀರಭದ್ರ ರಾವ್, ಅಧ್ಯಕ್ಷ ಜಗನ್‌ಮೋಹನ ರಾವ್, ಕಾರ್ಯದರ್ಶಿ ಎಂ. ಶ್ರಿಕಾಂತ, ರಾಜಶೇಖರ ಮೆಣಸಿನಕಾಯಿ ಇತರರು ಇದ್ದರು.